ಪಲಾಮು (ಜಾರ್ಖಂಡ್): ನಿಯಂತ್ರಣ ಕಳೆದುಕೊಂಡ ಕಾರು 12 ಕ್ಕೂ ಹೆಚ್ಚು ಜನರಿಗೆ ಡಿಕ್ಕಿಯಾಗಿದ್ದು, ಅದರಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಗಧ್ವಾದಿಂದ ದಾಲ್ತೋಂಗಂಜ್ ಕಡೆಗೆ ಗಧ್ವಾ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ರಸ್ತೆಯ ಪಕ್ಕದಲ್ಲಿ ಹಾದು ಹೋಗಿದ್ದು, ಎದುರಿಗೆ ಬಂದ ಜನರನ್ನು ಗುದ್ದಿಕೊಂಡು ಸಾಗಿದೆ. ಇದರಿಂದ ಭೀಕರ ಅನಾಹುತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅನಾಹುತದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೃತರ ಗುರುತು ಇನ್ನೂ ದೃಢಪಟ್ಟಿಲ್ಲ. ಸಂತ್ರಸ್ತರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಪೊಲೀಸರು ಕಾರು ಚಾಲಕ ಮತ್ತು ಅದರಲ್ಲಿದ್ದ ಜನರನ್ನು ಬಂಧಿಸಲಾಗಿದೆ.
ಅಪಘಾತದ ಬಳಿಕ ಗ್ರಾಮದಲ್ಲಿ ಆತಂಕ ಮತ್ತು ಶೋಕ ವ್ಯಕ್ತವಾಗಿದೆ. ಮೃತರೆಲ್ಲರೂ ಅದೇ ಗ್ರಾಮದ ನಿವಾಸಿಗಳು. ಅಪಘಾತಕ್ಕೀಡಾದ ಕಾರು ಇತ್ತೀಚೆಗೆ ಖರೀದಿಸಿದ್ದಾಗಿದೆ ಎಂದು ಹೇಳಲಾಗಿದೆ. ಅದು ನಿಯಂತ್ರಣ ತಪ್ಪಲು ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಕಾರು ಚಾಲಕ ಮತ್ತು ಗಾಯಾಳುಗಳು ಚೇತರಿಸಿಕೊಂಡ ಬಳಿಕ ಮಾಹಿತಿ ಪಡೆಯಲಾಗುವುದು. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಹಳ್ಳಕ್ಕೆ ಬಿದ್ದು 6 ಮಂದಿ ಸಾವು: ಉತ್ತರ ಪ್ರದೇಶದಲ್ಲಿ ಈಚೆಗೆ ಭೀಕರ ಅಪಘಾತ ಸಂಭವಿಸಿತ್ತು. ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಇಕೌನಾ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕಾರಿನಲ್ಲಿದ್ದವರು ಬಲರಾಮ್ಪುರದಿಂದ ನೇಪಾಳದ ನೇಪಾಲ್ಗಂಜ್ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ, ರಸ್ತೆ ಮಧ್ಯೆ ಬಂದ ದನವನ್ನು ಉಳಿಸಲು ಕಾರು ಚಾಲಕ ಪ್ರಯತ್ನಿಸಿದ್ದಾನೆ.
ಆಗ ವಾಹನ ನಿಯಂತ್ರಣ ತಪ್ಪಿ ಬಹ್ರೇಚ್ ಬಲರಾಮ್ಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಕಾರು ಚಾಲಕನಿಗೆ ಗಂಭೀರ ಗಾಯವಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಇಂತಹದ್ದೇ ಮತ್ತೊಂದು ಭೀಕರ ಅಪಘಾತದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಮತ್ತು ಡಂಪರ್ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ 'ಜೈಲು ಜೀವಗಳು' ಕೃತಿಯ ಲೇಖಕ ಸಾವು