ರಾಂಚಿ (ಜಾರ್ಖಂಡ್): ಜಾರ್ಖಂಡ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವಿಕಾಸ್ ಚಂದ್ರ ಶ್ರೀವಾಸ್ತವ ತಮ್ಮ ಸರ್ಕಾರಿ ಕೆಲಸದೊಂದಿಗೆ ಗ್ರಾಮೀಣ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೀರೆರೆಯುತ್ತಿದ್ದಾರೆ. ಡಿಎಸ್‌ಪಿ ವಿಕಾಸ್ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ.
ಹಜಾರಿಬಾಗ್ ಜಿಲ್ಲೆಯ ನಿವಾಸಿಯಾಗಿರುವ ವಿಕಾಸ್ ಚಂದ್ರ ಶ್ರೀವಾಸ್ತವ ಅವರು 2013ರಲ್ಲಿ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣಯಾಗಿದ್ದಾರೆ. ಇದಕ್ಕೂ ಮೊದಲಿನಿಂದಲೂ ಹಿಂದುಳಿದ ಮಕ್ಕಳಿಗೆ ಕಲಿಸುತ್ತಿದ್ದಾರೆ. ಅಲ್ಲದೇ, ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು 'ಡಿಎಸ್‌ಪಿ ಕಿ ಪಾಠಶಾಲಾ' ಎಂಬ ಹೆಸರಲ್ಲೇ ಉಚಿತ ಯೂಟ್ಯೂಬ್ ಚಾನಲ್ ಸಹ ಪ್ರಾರಂಭಿಸಿದ್ದಾರೆ. ಇದರಿಂದ ಅಧಿಕ ವಿದ್ಯಾರ್ಥಿಗಳು ಇದರ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ.
ವಿಕಾಸ್ ಚಂದ್ರ ಇಲ್ಲಿನ ಗುರು ಗೋಬಿಂದ್ ಸಿಂಗ್ ರಸ್ತೆಯಲ್ಲಿರುವ ಎಲಿಗೆಂಟ್ ಕೋಚಿಂಗ್ ಸೆಂಟರ್‌ನಲ್ಲಿ ತಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಈ ಸಂಸ್ಥೆಯು 2001ರಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧಿಸುತ್ತಿದೆ. ತಾವು ತಯಾರಿ ನಡೆಸುವಾಗಲೂ ಅವರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಡಿಎಸ್‌ಪಿ ಆಗಿ ನೇಮಕಗೊಂಡ ನಂತರವೂ ವಿಕಾಸ್ ತಮ್ಮ ಬೋಧನೆ ನಿಲ್ಲಿಸಿಲ್ಲ.
ಅಷ್ಟೇ ಅಲ್ಲ, ಹಳ್ಳಿಗಳು ಅಥವಾ ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಿದಾಗ ಅವರು ಅಲ್ಲಿನ ಮಕ್ಕಳನ್ನು ತಲುಪಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸುತ್ತಾರೆ. ಜೊತೆಗೆ ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದೇ ಉಚಿತ ಯೂಟ್ಯೂಬ್ ಚಾನಲ್ ಶುರು ಮಾಡಿರುವ ಅವರು ಸರ್ಕಾರಿ ಕರ್ತವ್ಯದೊಂದಿಗೆ ಎರಡೂ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
'ಈಟಿವಿ ಭಾರತ್' ಜೊತೆ ಮಾತನಾಡಿದ ಡಿಎಸ್‌ಪಿ ವಿಕಾಸ್ ಚಂದ್ರ ಶ್ರೀವಾಸ್ತವ, "ಇದುವರೆಗೆ ನನ್ನ 16 ವಿದ್ಯಾರ್ಥಿಗಳು ಡಿಎಸ್‌ಪಿ ಹುದ್ದೆಗಳಿಗೆ ನೇಮಕವಾಗಿದ್ದಾರೆ. 35 ಮಂದಿ ಆಡಳಿತಾತ್ಮಕ ಸೇವೆಗಳು ಮತ್ತು ಇತರ ಕೇಡರ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 2012ರಲ್ಲಿ 50 ವಿದ್ಯಾರ್ಥಿಗಳು ಇನ್ಸ್‌ಪೆಕ್ಟರ್ ಹುದ್ದೆಗಳ ಮರುಸ್ಥಾಪನೆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ತಮ್ಮ ಡಿಎಸ್‌ಪಿ ಕಿ ಪಾಠಶಾಲಾ ಯೂಟ್ಯೂಬ್ ಚಾನಲ್‌ನಲ್ಲಿ ಲೈವ್ ತರಗತಿಗಳನ್ನು ವಿಕಾಸ್ ನೀಡುತ್ತಾರೆ. ಏಕಕಾಲಕ್ಕೆ 500ರಿಂದ 600 ವಿದ್ಯಾರ್ಥಿಗಳು ಯೂಟ್ಯೂಬ್ ಲೈವ್ನಲ್ಲಿ ಡಿಸಿಪಿ ಪಾಠವನ್ನು ಆಲಿಸುತ್ತಾರೆ. ಪ್ರಸ್ತುತ ಯೂಟ್ಯೂಬ್ ಚಾನಲ್ ಸುಮಾರು 50 ಸಾವಿರ ಚಂದಾದಾರರನ್ನು ಹೊಂದಿದೆ. ಇದಲ್ಲದೆ, ಡಿಎಸ್‌ಪಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗಾಗಿ ಪುಸ್ತಕಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಯ ಉಚಿತ ಆನ್ಲೈನ್ ಕ್ಲಾಸ್: 22 ವಿದ್ಯಾರ್ಥಿಗಳು JPSC ಪರೀಕ್ಷೆ ಪಾಸ್!