ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಲ್ಲಿನ ತಲಪ್ಪುಳ ಸಮೀಪ ಜೀಪ್ವೊಂದು ರಸ್ತೆ ಪಕ್ಕದ ಕಮರಿಗೆ ಬಿದ್ದು ದುರ್ಘಟನೆ ನಡೆದಿದೆ. ಮೃತರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. 12 ಜನ ಮಹಿಳೆರು ಹಾಗೂ ಚಾಲಕ ಸೇರಿ ಒಟ್ಟು 13 ಮಂದಿ ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮ ಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ ಆಳದ ಕಂದಕಕ್ಕೆ ಜೀಪ್ ಉರುಳಿಬಿದ್ದಿದೆ. ಘಟನಾ ಸ್ಥಳ ಕಲ್ಲಿನ ಭೂಪ್ರದೇಶವಾಗಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿತ್ತು.
ಅಲ್ಲದೇ, ಈ ಪ್ರದೇಶ ಕಲ್ಲುಗಳಿಂದ ಕೂಡಿರುವುದರಿಂದ ಮೃತರು ಹಾಗೂ ಗಾಯಾಳುಗಳ ತಲೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸಾವುನೋವಿಗೆ ಇದು ಮುಖ್ಯ ಕಾರಣವಾಗಿದೆ. ಈ ಪೈಕಿ 6 ಮಂದಿಯ ಗುರುತು ಪತ್ತೆಯಾಗಿದೆ. ಉಮಾ, ರಾಣಿ, ಶಾಂತ, ರಬಿಯಾ, ಶಜಾ ಹಾಗೂ ಲೀಲಾ ಎಂದು ಗುರುತಿಸಲಾಗಿದೆ. ಇವೆರಲ್ಲರೂ ಇಲ್ಲಿನ ಕಂಬಮಾಳ ಹಾಗೂ ತವಿಂಜಾಲ್ ಪಂಚಾಯತ್ ವ್ಯಾಪ್ತಿಯ ನಿವಾಸಿಗಳೆಂದು ತಿಳಿದುಬಂದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಅರಣ್ಯ ಸಚಿವ ಎ.ಕೆ.ಶಶಿಧರನ್ ಪ್ರತಿಕ್ರಿಯಿಸಿ, ''ಸಿಎಂ ಪಿಣರಾಯಿ ವಿಜಯನ್ ನಿರ್ದೇಶನದಂತೆ ಮಾನಂತವಾಡಿಗೆ ತೆರಳುತ್ತಿದ್ದೇನೆ. ಅಲ್ಲಿನ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಮೃತದೇಹಗಳನ್ನೂ ಇದೇ ಆಸ್ಪತ್ರೆಗೆ ರವಾನಿಸಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 15 ಅಡಿ ಆಳದ ಕಾಲುವೆಗೆ ಉರುಳಿ ಬಿದ್ದ ಸ್ಕಾರ್ಪಿಯೋ, ಐವರು ನೀರುಪಾಲು
ಬಿಹಾರದ ಸರನ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಐವರು ಮೃತಪಟ್ಟ ಘಟನೆ ನಡೆದಿತ್ತು. ಇಲ್ಲಿನ ಮಶ್ರಕ್‌ನ ಕರ್ನ್ ಕುಡಾರಿಯಾ ಗ್ರಾಮದಲ್ಲಿ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ 15 ಅಡಿ ಆಳದ ಕಾಲುವೆಗೆ ಬಿದ್ದು ದುರಂತ ಜರುಗಿತ್ತು. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಯುವಕ ಗಾಯಗೊಂಡಿದ್ದರು. ಇವೆಲ್ಲರೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಾಘಿ ಎಂಬ ಗ್ರಾಮಕ್ಕೆ ತೆರಳಿದ್ದರು ಎಂದು ವರದಿಯಾಗಿತ್ತು.