ಅಯೋಧ್ಯೆ(ಉತ್ತರ ಪ್ರದೇಶ) : ಮರ್ಯಾದ ಪುರುಷೋತ್ತಮ ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ರಾಮಲಲ್ಲಾ ಭವ್ಯ ಮಂದಿರ ನಿರ್ಮಾಣ ನಡೆಯುತ್ತಿದೆ. ಹೀಗಾಗಿ ಭಾನುವಾರ ಭಕ್ತರಿಗಾಗಿ ಜನ್ಮಭೂಮಿ ಪಥವನ್ನು ತೆರೆಯಲಾಗಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಮಾರ್ಗದ ಮೂಲಕ ರಾಮಭಕ್ತರು ಮುಖ್ಯರಸ್ತೆಯ ಮೂಲಕ ನೇರವಾಗಿ ರಾಮಲಲ್ಲಾಕ್ಕೆ ಸುಲಭವಾಗಿ ಹೋಗಬಹುದಾಗಿದೆ.
ಈ ಮಾರ್ಗವನ್ನು ವಿಶೇಷವಾಗಿ ಭಕ್ತರಿಗಾಗಿ ಮಾಡಲಾಗಿದೆ. ಜನ್ಮಭೂಮಿ ಮಾರ್ಗದ ಹಲವೆಡೆ ಭಕ್ತರಿಗೆ ಕುಳಿತುಕೊಳ್ಳಲು ಬೆಂಚು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗ ಆರಂಭಗೊಂಡರೆ ಭಕ್ತಾದಿಗಳು ಕೇವಲ ಅರ್ಧ ಕಿ.ಮೀ. ಗಿಂತ ಕಡಿಮೆ ದೂರದಲ್ಲಿ ಪ್ರಯಾಣಿಸಿ ಶ್ರೀರಾಮನ ದರ್ಶನ ಪಡೆಯಬಹುದು.
ಅದೇ ಮಾರ್ಗದಿಂದ ಪ್ರವೇಶ ಮತ್ತು ನಿರ್ಗಮನ: ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ, ಡಾ. ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರೊಂದಿಗೆ ಅಯೋಧ್ಯೆ ವಿಭಾಗದ ವಿಭಾಗೀಯ ಆಯುಕ್ತ ಗೌರವ್ ದಯಾಳ್, ಜಿಲ್ಲಾಧಿಕಾರಿ ನಿತೀಶ್ ಕುಮಾರ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜಕರನ್ ನಯ್ಯರ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಸಂಘದ ಎಲ್ಲಾ ಮುಖಂಡರ ಸಮ್ಮುಖದಲ್ಲಿ ರಾಮಜನ್ಮಭೂಮಿ ಪಥವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಹ್ವಾನಿತರಾದ ಎಲ್ಲ ಗಣ್ಯರು, ರಾಮಲಲ್ಲಾ ದರ್ಶನಕ್ಕೆ ತೆರಳುವ ಭಕ್ತರನ್ನು ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿದರು.
ಭಕ್ತರಿಗೆ ಸೌಲಭ್ಯ ಸಿಗಲಿದೆ : ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ''ಅಯೋಧ್ಯೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಜನ್ಮಭೂಮಿ ಮಾರ್ಗವು ಭಕ್ತರನ್ನು ಬಿರ್ಲಾ ಧರ್ಮಶಾಲಾ ಮುಂಭಾಗದಿಂದ ನೇರವಾಗಿ ರಾಮಲಲ್ಲಾ ಗರ್ಭಗುಡಿಗೆ ಕರೆದೊಯ್ಯುತ್ತದೆ. ಈ ಮಾರ್ಗದ ಮೂಲಕ ರಾಮ ಭಕ್ತರು ಸುಲಭವಾಗಿ ರಾಮಲಲ್ಲಾ ದರ್ಶನಕ್ಕೆ ಬರುತ್ತಾರೆ. ಹಿಂದಿನ ದರ್ಶನ ಮಾರ್ಗಕ್ಕೆ ಹೋಲಿಸಿದರೆ ಈ ದರ್ಶನ ಮಾರ್ಗದಿಂದ ಭಕ್ತರು ಸುಮಾರು ಅರ್ಧ ಕಿಲೋಮೀಟರ್ ಕಡಿಮೆ ನಡೆಯಬೇಕಾಗುತ್ತದೆ'' ಎಂದಿದ್ದಾರೆ.
ಮೊದಲು ಹನುಮಂತನಗರಿ ಮೂಲಕವೇ ಪ್ರವೇಶ : ರಾಮಲಲ್ಲಾ ದರ್ಶನಕ್ಕೆ ಬಂದಿದ್ದ ಭಕ್ತ ವಿಕಲ್ಪ ತ್ರಿವೇದಿ ಮಾತನಾಡಿ, ಈ ಹಿಂದೆ ರಾಮಲಲ್ಲಾ ದರ್ಶನಕ್ಕೆ ಬಂದಾಗ ಹನುಮಂತನಗರ ಮಾರ್ಗವಾಗಿ ರಾಮಜನ್ಮಭೂಮಿ ಕಾಂಪ್ಲೆಕ್ಸ್‌ಗೆ ತೆರಳಲು ದಾರಿ ಸಿಕ್ಕಿತ್ತು. ರಸ್ತೆಗಳು ತುಂಬಾ ಕಿರಿದಾಗಿದ್ದು, ಜನಸಂದಣಿಯಿಂದ ಸಮಸ್ಯೆ ಉಂಟಾಗಿದೆ. ಈ ರಸ್ತೆ ತುಂಬಾ ವಿಶಾಲವಾಗಿದೆ. ಜನಜಾತ್ರೆಯಲ್ಲಿಯೂ ರಾಮನ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ರಾಮ ಭಕ್ತರು ಮತ್ತು ಪ್ರವಾಸಿಗರು ಈ ಮಾರ್ಗದ ಮೂಲಕ ರಾಮಲಲ್ಲಾನ ದರ್ಶನವನ್ನು ಸುಲಭವಾಗಿ ಪಡೆಯಬಹುದು ಎಂದಿದ್ದಾರೆ.
ಇದನ್ನೂ ಓದಿ: ರಾಮಮಂದಿರಕ್ಕೆ 20 ಕೆಜಿ ಬೆಳ್ಳಿ ಇಟ್ಟಿಗೆ; 8 ಹಿಂದೂ ಕಾರ್ಯಕರ್ತರ ಹೆಸರು ಕೆತ್ತನೆ