ಜಮ್ಮು: ಜಮ್ಮು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಸುವರ್ಣ ಮಹೋತ್ಸವವನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಡಿಸೆಂಬರ್ 1 ರಂದು ನವದೆಹಲಿಯಿಂದ ಹೊರಟಿದ್ದ ಶ್ರೀನಗರ ಎಕ್ಸ್‌ಪ್ರೆಸ್ (ಝೀಲಂ ಎಕ್ಸ್‌ಪ್ರೆಸ್) ಡಿಸೆಂಬರ್ 2 1972 ರಂದು ಜಮ್ಮು ರೈಲು ನಿಲ್ದಾಣ ತಲುಪಿತು. 50 ವರ್ಷಗಳ ಹಿಂದೆ ಶ್ರೀನಗರ ಎಕ್ಸ್‌ಪ್ರೆಸ್‌ದಿಂದ ಪ್ರಾರಂಭವಾದ ಪ್ರಯಾಣವು ಈಗ ದೇಶದ ಅತ್ಯಂತ ವೇಗದ ರೈಲು ವಂದೇ ಭಾರತ ವರೆಗೂ ತಲುಪಿದೆ.
ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಡಿಸೆಂಬರ್ 2, 1972 ರಂದು ಪ್ರಯಾಣಿಕರನ್ನು ಹೊತ್ತು ಜಮ್ಮು ನಿಲ್ದಾಣಕ್ಕೆ ರೈಲು ಬಂದಿತ್ತು. ಅಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ರೈಲು ನಿಲ್ದಾಣದಲ್ಲಿ ಹಾಜರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಆದರೆ, ಪ್ರಸ್ತುತ 55 ರೈಲುಗಳು ಜಮ್ಮು ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿವೆ.
50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೇಗಂಪುರ ರೈಲಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಮ್ಮು ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 1972 ರಲ್ಲಿ, ಜಮ್ಮುವಿಗೆ ಕೇವಲ ಸರಕು ರೈಲುಗಳು ಓಡುತ್ತಿದ್ದವು. ಡಿಸೆಂಬರ್ 2, 1972 ರಂದು, ಮೊದಲ ಬಾರಿಗೆ ಪ್ಯಾಸೆಂಜರ್ ರೈಲು ಜಮ್ಮು ತಲುಪಿತು. ಆಗ ಜಮ್ಮುವಿನಲ್ಲಿ ಒಂದೇ ಒಂದು ಪ್ಲಾಟ್‌ಫಾರ್ಮ್ ಇತ್ತು, ಅದೂ ಕೂಡ ಡಾಂಬರು ಹಾಕಿರಲಿಲ್ಲ.
ಮೊದಲ ರೈಲಿನ ನಂತರ, ಕಾಶ್ಮೀರ ರೈಲು ಜಮ್ಮು ಮೇಲ್, ಸೀಲ್ದಾಹ್ ಎಕ್ಸ್‌ಪ್ರೆಸ್ ಮತ್ತು ಜಮ್ಮು-ಪಠಾಣ್‌ಕೋಟ್ ಮೂರು ಇತರ ರೈಲುಗಳನ್ನು ಓಡಿಸಲಾಯಿತು. ನಂತರ, ರೈಲ್ವೆಯು ಜಮ್ಮುವಿನಿಂದ ರಾಜಧಾನಿ ರೈಲನ್ನು ಓಡಿಸಲು ಪ್ರಾರಂಭಿಸಿತು. 1972 ರ ಮೊದಲು ಹೊರ ರಾಜ್ಯಗಳಿಂದ ಮಾತಾ ವಿಷ್ಣು ದೇವಿಯ ಭಕ್ತರು ಪಠಾಣ್‌ಕೋಟ್‌ನಲ್ಲಿ ಇಳಿಯಬೇಕಿತ್ತು.
ಆದರೆ, ಜಮ್ಮುವಿನಿಂದ ಹರಿದ್ವಾರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಪಠಾಣ್‌ಕೋಟ್‌ನಿಂದ ರೈಲಿನಲ್ಲಿ ಹೋಗಬೇಕಿತ್ತು. 1969 ರಲ್ಲಿ ರೈಲು ಮಾರ್ಗ ವಿಸ್ತರಣೆಗೆ ಚಾಲನೆ ನೀಡಲಾಯಿತು. 1969 ರಲ್ಲಿ, ಕಥುವಾ-ಜಮ್ಮುವಿಗೆ ರೈಲು ಮಾರ್ಗ ಹಾಕುವ ಕೆಲಸವನ್ನು ಪ್ರಾರಂಭಿಸಲಾಯಿತು, ಅದು ಮೂರು ವರ್ಷಗಳಲ್ಲಿ ಪೂರ್ಣಗೊಂಡಿತು. ಅಲ್ಲದೆ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲೂ ಈ ರೈಲು ಯೋಜನೆ ಕಾಮಗಾರಿ ನಿಂತಿರಲಿಲ್ಲ.
ಜಮ್ಮು ರೈಲು ನಿಲ್ದಾಣ ಅಭಿವೃದ್ಧಿ ಪಥದತ್ತ ಸಾಗಿದ್ದು, 30 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 266 ಕೋಟಿ ರೂ. ವೆಚ್ಚದ ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ, ಭಾರತೀಯ ರೈಲ್ವೆ ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ. ಮೊದಲು ರೈಲು ಪ್ರಯಾಣಿಕರನ್ನು ಸಾಗಿಸಲು ಕಡಿಮೆ ಸಾಮರ್ಥ್ಯ ಹೊಂದಿದ್ದವು.
ರೈಲು ಕೇವಲ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.ರೈಲು ಎಳೆಯುವ ಸಾಮರ್ಥ್ಯ, ಬೋಗಿಗಳ ಒಳಗೆ ಮತ್ತು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸೌಕರ್ಯ ಸುಧಾರಿಸಿದೆ. ಟಿಕೆಟ್ ವ್ಯವಸ್ಥೆ ಸಹ ಬದಲಾಗಿದೆ. ಈಗ ಅಂಗೈಯಲ್ಲೇ ಮೊಬೈಲ್ ದಿಂದ ಟಿಕೆಟ್ ಬುಕ್ ಮಾಡಬಹುದು. ಹಲವಾರು ಸುಧಾರಣೆಗಳು ಇನ್ನೂ ನಡೆಯುತ್ತಿವೆ. ಜಮ್ಮು ರೈಲು ನಿಲ್ದಾಣವು 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಎಡಿಆರ್‌ಎಂ, ಬಲದೇವ್ ರಾಜ್ ಪ್ರಯಾಣಿಕರ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ:ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಪೊಲೀಸರಿಂದ ಸುತ್ತುವರೆದ ಶ್ರೀರಂಗಪಟ್ಟಣ