ನವದೆಹಲಿ: 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಮೇ 4 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಜೈಲಿನಲ್ಲಿರುವ ಪತ್ನಿ ಲೀನಾ ಮರಿಯಾ ಪೌಲ್ರನ್ನು ಭೇಟಿಯಾಗಬೇಕೆಂದು ಒತ್ತಾಯಿಸುತ್ತಿದ್ದಾನೆ.
ಅನಾರೋಗ್ಯಪೀಡಿತ ಸುಕೇಶ್ಗೆ ಸದ್ಯ ಸಲೈನ್ ಹಾಕಲಾಗಿದೆ. ಕಾರಾಗೃಹದ ಅಧಿಕಾರಿಗಳು ಆತನಿಗೆ ಕಾನೂನು ಅರ್ಥಮಾಡಿಕೊಡಲು ಪ್ರಯತ್ನಿಸುತ್ತಿದ್ದರೂ ಆತ ಉಪವಾಸ ಮುಂದುವರೆಸಿದ್ದಾನೆ. ವಿಶೇಷ ತಂಡವು ಆತನ ಚಲನವಲನಗಳ ಮೇಲೆ ಗಮನ ಇಟ್ಟಿದ್ದು, ನ್ಯಾಯಾಲಯಕ್ಕೆ ಮಾಹಿತಿ ತಿಳಿಸುವುದಾಗಿ ಜೈಲಾಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: ತಿಹಾರ್ ಜೈಲಿನೊಳಗಿಂದ ₹200 ಕೋಟಿ ವಂಚಿಸಿದ ಪ್ರಕರಣ.. ಮತ್ತೊಬ್ಬ ಜೈಲು ಅಧಿಕಾರಿ ಬಂಧನ!
ಜೈಲಿನ ನಿಯಮಾವಳಿಗಳ ಪ್ರಕಾರ, ತಿಂಗಳಿಗೆರಡು ಬಾರಿ ಒಳ-ಜೈಲಿನ ಕೈದಿಗಳ ಭೇಟಿಗೆ ಅನುವು ಮಾಡಿಕೊಡಲಾಗುತ್ತದೆ. ಆದ್ರೆ ಸುಕೇಶ್ ತನ್ನ ಪತ್ನಿಯನ್ನು ಪದೇ ಪದೆ ಭೇಟಿಯಾಗಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಇದು ಆತನ ಎರಡನೇ ಉಪವಾಸ ಸತ್ಯಾಗ್ರಹ. ಪ್ರತಿಭಟನೆಯಿಂದಾಗಿ ಸುಕೇಶ್ 5 ಕೆ.ಜಿ ತೂಕ ಕಳೆದುಕೊಂಡಿದ್ದಾನೆ ಎಂದು ಅವರು ತಿಳಿಸಿದರು.
ಸುಕೇಶ್ ಏಪ್ರಿಲ್ 23 ರಿಂದ ಮೇ 2 ರವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ. ಮೇ 3ರ ರಾತ್ರಿ ಊಟ ಮಾಡಿದ್ದಾನೆ. ಆದ್ರೆ ಮೇ 4 ರಿಂದ ಮತ್ತೆ ತಮ್ಮ ಉಪವಾಸ ಶುರು ಮಾಡಿದ್ದಾನೆ. ಈಗ ಆತನಿಗೆ ಸಲೈನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.