ಆಗ್ರಾ (ಉತ್ತರಪ್ರದೇಶ) : ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಪ್ರವೇಶಿಸಿ ಶಿವ ಪೂಜೆ ಮಾಡುವ ಮೂಲಕ ಶುದ್ಧೀಕರಿಸುವುದಾಗಿ ಘೋಷಿಸಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್ ಅವರನ್ನು ಉತ್ತರಪ್ರದೇಶದ ಪೊಲೀಸರು ತಡೆದು, ಆಗ್ರಾದಿಂದ ಅಯೋಧ್ಯೆಗೆ ಮರಳಿ ಕರೆದುಕೊಂಡು ಹೋಗಿದ್ದಾರೆ.
ಮೇ 5ರಂದು ತಾಜ್ ಮಹಲ್ ಪ್ರವೇಶಿಸುವ ಮೂಲಕ ಶಿವನ ಪೂಜೆ ಮಾಡಲಾಗುವುದು ಎಂದು ಪರಮಹಂಸ ದಾಸ್ ಪ್ರಕಟಿಸಿದ್ದರು. ಆದರೆ, ಒಂದು ದಿನ ಮೊದಲೇ ಅಂದರೆ ಇವತ್ತು ಅಯೋಧ್ಯೆಯಿಂದ ಆಗ್ರಾಕ್ಕೆ ಬಂದು ತಲುಪಿದ್ದರು. ಈ ವೇಳೆ ತಾಜ್‌ಮಹಲ್ ಪ್ರವೇಶಿಸುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನು ವಿರೋಧಿಸಿ ಪೊಲೀಸರೊಂದಿಗೆ ಜಗದ್ಗುರು ತೀವ್ರ ವಾಗ್ವಾದ ನಡೆಸಿದರು.
ನಂತರ ಅವರನ್ನು ಆಗ್ರಾ-ದೆಹಲಿ ಹೆದ್ದಾರಿಯ ಕೀತಮ್‌ನಲ್ಲಿರುವ ಅರಣ್ಯ ಇಲಾಖೆಯ ಅತಿಥಿಗೃಹಕ್ಕೆ ಪೊಲೀಸರು ಕರೆದುಕೊಂಡು ಬಂದರು. ಅಲ್ಲಿಂದ ಆಗ್ರಾ ಎಸ್‌ಎಸ್‌ಪಿ ಸುಧೀರ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಅವರನ್ನು ಅಯೋಧ್ಯೆಗೆ ಕಳುಹಿಸಲಾಯಿತು.
ಏ.26ರಂದೂ ಪ್ರಯತ್ನಿಸಿದ್ದರು : ಇದೇ ಏಪ್ರಿಲ್ 26ರಂದು ಕೂಡ ಪರಮಹಂಸ ದಾಸ್ ಅಯೋಧ್ಯೆಯಿಂದ ಆಗ್ರಾಕ್ಕೆ ಬಂದಿದ್ದರು. ಕೇಸರಿ ಬಟ್ಟೆ ಧರಿಸಿ ಮತ್ತು ಬ್ರಹ್ಮದಂಡ ಹಿಡಿದು ತಾಜ್‌ಮಹಲ್ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಅವತ್ತು ಕೂಡ ಪೊಲೀಸರು ತಡೆದಿದ್ದರು. ಇನ್ನು, ಈಗಿನ ತಾಜ್ ಮಹಲ್ ನಿಜವಾಗಿ ಶಿವನ ತೇಜೋ ಮಹಾಲಯವಾಗಿದೆ ಎಂದು ಪ್ರತಿಪಾದಿಸಿ, ಶುದ್ಧೀಕರಣ ಮಾಡಲು ಕೇಸರಿ ಬಟ್ಟೆ ಹಾಕಿದ್ದ ಈ ವ್ಯಕ್ತಿ ಯತ್ನಿಸಿದ್ದರು.
ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ಬೆಟ್ಟದ ಬಂಡೆಯಲ್ಲಿ ಸಿಲುಕಿದ್ದ ನಾಯಿ ರಕ್ಷಣೆ