ಜಬಲ್ಪುರ(ಮಧ್ಯಪ್ರದೇಶ): ಮಧ್ಯಪ್ರದೇಶ ಆರ್ಥಿಕ ಅಪರಾಧಗಳ ವಿಭಾಗ ಇಒಡಬ್ಲ್ಯು ಜಬಲ್‌ಪುರದ ಬಿಷಪ್ ಮನೆಯ ಮೇಲೆ ದಾಳಿ ನಡೆಸಿದೆ. ಬಿಷಪ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವು ಸಂಸ್ಥೆಗಳ ಅಧ್ಯಕ್ಷರಾಗುವ ಮೂಲಕ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಚರ್ಚ್ ಆಫ್ ನಾರ್ತ್ ಇಂಡಿಯಾದ, ದಿ ಬೋರ್ಡ್ ಆಫ್ ಎಜುಕೇಶನ್‌ನ ಅಧ್ಯಕ್ಷ ಬಿಷಪ್ ಪಿಸಿ ಸಿಂಗ್ ವಿರುದ್ಧ 2 ಕೋಟಿ 70 ಲಕ್ಷ ರೂಪಾಯಿಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಿ ಮತ್ತು ಅದನ್ನು ಸ್ವತಃ ಬಳಸಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದವು.
ಈ ದೂರಿನ ಅನ್ವಯ ತನಿಖೆ ನಡೆಸಿದ ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ, ಇಂದು ಬಿಷಪ್ ಹೌಸ್ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಬಿಷಪ್ ಮನೆಯಲ್ಲಿ ವಿದೇಶಿ ಕರೆನ್ಸಿ ಸೇರಿದಂತೆ ಎರಡು ಸಾವಿರ ಮತ್ತು ಐನೂರು ರೂ. ನೋಟುಗಳ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ನೋಟು ಎಣಿಸುವ ಯಂತ್ರ ತರಿಸಿ ನಗದು ಲೆಕ್ಕ: ಬಿಷಫ್ ನಿವಾಸದಲ್ಲಿ ಸಿಕ್ಕ ಕೋಟಿ ಕೋಟಿ ನಗದಿನ ಎಣಿಕೆ ಮಾಡಲು ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಟು ಎಣಿಕೆ ಯಂತ್ರ ತರಿಸಿಕೊಂಡ ಇಒಡಬ್ಲ್ಯು ಸಿಬ್ಬಂದಿ ನೋಟಿನ ಎಣಿಕೆ ಮಾಡುತ್ತಿದೆ. ಇತ್ತೀಚಿನ ವರದಿ ಪ್ರಕಾರ 1.65 ಕೋಟಿ ನಗದು ಎಣಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ದಿ ಬೋರ್ಡ್ ಆಫ್ ಎಜುಕೇಶನ್‌ನ ಚರ್ಚ್ ಆಫ್ ನಾರ್ತ್ ಇಂಡಿಯಾದ ಅಧ್ಯಕ್ಷ ಬಿಷಪ್ ಪಿಸಿ ಸಿಂಗ್ ಅವರ ವಿರುದ್ಧ ದೇಶಾದ್ಯಂತ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ವಂಚನೆ, ಫೋರ್ಜರಿ, ಹಣ ದುರುಪಯೋಗ ಸೇರಿದಂತೆ ಭೂ ವಹಿವಾಟಿಗೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ ಎಂದು ಆರ್ಥಿಕ ಅಪರಾಧಗಳ ವಿಭಾಗ ಇಒಡಬ್ಲ್ಯು ಅಧಿಕಾರಿಗಳು ಹೇಳಿದ್ದಾರೆ.
ಸೊಸೈಟಿ ಅಧಿಕಾರಿಗಳ ವಿರುದ್ಧವೂ ತನಿಖೆ: ಇಒಡಬ್ಲ್ಯು ತನಿಖೆಯಲ್ಲಿ, ಬಿಷಪ್ ಪಿಸಿ ಸಿಂಗ್ ಅನೇಕ ಸಂಸ್ಥೆಗಳ ಅಧ್ಯಕ್ಷರಾಗುವ ಮೂಲಕ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಅಂಶವೂ ಬಹಿರಂಗವಾಗಿದೆ. ಈ ಅಕ್ರಮದಲ್ಲಿ ಸೊಸೈಟಿಯ ಅಧಿಕಾರಿಗಳು ಸೇರಿದ್ದಾರೆ ಎನ್ನಲಾಗಿದ್ದು ಇಒಡಬ್ಲ್ಯು ಅಧಿಕಾರಿಗಳು ಅವರ ವಿಚಾರಣೆಗೂ ಮುಂದಾಗಿದ್ದಾರೆ.
ಕೋಟಿ ಕೋಟಿ ಅವ್ಯವಹಾರ ಆರೋಪ: 2004-05ರಿಂದ 2011-12ರ ಅವಧಿಯಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಂದ ಸುಮಾರು ಎರಡು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಬಿಷಫ್ ಈ ಹಣವನ್ನು ತಮ್ಮ ಸ್ವಂತಕ್ಕೂ ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಈ ಸಂಬಂಧ ಆರೋಪಿಗಳಾದ ಬಿಷಪ್ ಪಿಸಿ ಸಿಂಗ್, ಬಿಎಸ್ ಸೋಲಂಕಿ, ಅಂದಿನ ಸಹಾಯಕ ರಿಜಿಸ್ಟ್ರಾರ್ ಫರ್ಮ್ಸ್ ಮತ್ತು ಸಂಸ್ಥೆಗಳು ಜಬಲ್‌ಪುರ ವಿರುದ್ಧ ಕಲಂ 406, 420, 468, 471, 120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದನ್ನು ಓದಿ:ಪೆಟ್ರೋಲ್ ಹಾಕಿ ಸುಡುವುದಾಗಿ ಯುವತಿಗೆ ಬ್ಲ್ಯಾಕ್ಮೇಲ್: ಆರೋಪಿ ಶಾರುಖ್ ಬಂಧನ