ಹೈದರಾಬಾದ್: "ತೆಲಂಗಾಣ ರಾಜ್ಯದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವನ್ನು ನೋಡುವುದು ನನ್ನ ಕನಸು" ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭಾನುವಾರ ಹೇಳಿದ್ದಾರೆ. ಇದೇ ವೇಳೆ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಹೈದರಾಬಾದ್ ಸಮೀಪದ ತುಕ್ಕುಗುಡಾದಲ್ಲಿ ನಡೆದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, "ನಾವು 6 ಗ್ಯಾರಂಟಿಗಳನ್ನು ಘೋಷಿಸುತ್ತಿದ್ದೇವೆ. ಅವುಗಳಲ್ಲಿ ಪ್ರತಿಯೊಂದನ್ನೂ ಪೂರೈಸಲು ನಾವು ಬದ್ಧ" ಎಂದರು. ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ ಅಡಿಯಲ್ಲಿ ತೆಲಂಗಾಣದಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು ರಾಜ್ಯಾದ್ಯಂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುವುದು ಎಂದು ಪಕ್ಷದ ಭರವಸೆಗಳನ್ನು ವಿವರಿಸಿದರು.
ಮುಂದುವರೆದು ಮಾತನಾಡಿ, "ನಾನು ನನ್ನ ಸಹೋದ್ಯೋಗಿಗಳೊಂದಿಗೆ ತೆಲಂಗಾಣದ ಭಾಗವಾಗಲು ಅವಕಾಶ ಒದಗಿ ಬಂದಿದೆ. ಈಗ ಈ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ನಮ್ಮ ಕರ್ತವ್ಯ" ಎನ್ನುತ್ತಾ ತೆಲಂಗಾಣದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವನ್ನು ನೋಡುವುದು ನನ್ನ ಕನಸು. ನೀವು ನಮ್ಮನ್ನು ಬೆಂಬಲಿಸುತ್ತೀರಾ ಎಂದು ಜನರಿಗೆ ಕೇಳಿದರು. (ಪಿಟಿಐ)
ಬಿಆರ್‌ಎಸ್ ಎಂದರೆ 'ಬಿಜೆಪಿ ರಿಸ್ತೇದಾರ್ ಸಮಿತಿ'- ರಾಹುಲ್ ಗಾಂಧಿ: ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಆರ್‌ಎಸ್ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಬಿಆರ್‌ಎಸ್ ಎಂದರೆ 'ಬಿಜೆಪಿ ರಿಸ್ತೇದಾರ್ ಸಮಿತಿ' (ಬಿಜೆಪಿ ಸಂಬಂಧಿ ಸಮಿತಿ). ಪ್ರತಿಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ಕೇಂದ್ರ ದಾಳಿ ನಡೆಸುತ್ತದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಎಐಎಂಐಎಂ ನಾಯಕರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗುವುದಿಲ್ಲ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೆಲ್ಲಾ ತಮ್ಮವರೆಂದು ಪರಿಗಣಿಸಿದ್ದಾರೆ ಎಂದು ಆಪಾದಿಸಿದ್ದರು.
ಕಾಂಗ್ರೆಸ್ ಕೇವಲ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧ ಹೋರಾಡುತ್ತಿಲ್ಲ. ಬಿಜೆಪಿ ಮತ್ತು ಸಂಸದ ಅಸಾದುದ್ದೀನ್ ಓವೈಸಿಯ ಎಐಎಂಐಎಂ ವಿರುದ್ಧವೂ ಹೋರಾಟ ನಡೆಸಲಿದೆ. ಎಐಎಂಐಎಂ ಮತ್ತು ಬಿಆರ್‌ಎಸ್ ಪ್ರತ್ಯೇಕ ಪಕ್ಷಗಳಾಗಿದ್ದರೂ, ಒಟ್ಟಾಗಿ ಕೆಲಸ ಮಾಡುತ್ತಿವೆ. ಲೋಕಸಭೆಯಲ್ಲಿ ಬಿಜೆಪಿಗೆ ಅಗತ್ಯವಿದ್ದಾಗ ಬಿಆರ್‌ಎಸ್ ಸಂಸದರು ನೆರವಿಗೆ ಬಂದಿದ್ದಾರೆ. ಕೃಷಿ ಕಾಯ್ದೆಗಳು, ಜಿಎಸ್‌ಟಿ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಚುನಾವಣೆಗಳಲ್ಲಿ ಬಿಜೆಪಿಗೆ ಬಿಆರ್‌ಎಸ್ ಬೆಂಬಲ ನೀಡಿದೆ. ಹೀಗಾಗಿ ಅವರೆಲ್ಲರೂ ಮಿತ್ರರು ಎಂದು ದೂರಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಗಳನ್ನು ನಿಲ್ಲಿಸಲು ಪ್ರಯತ್ನಿಸಿದರು. ಅದ್ಯಾವುದೂ ಸಾಧ್ಯವಾಗಿಲ್ಲ. ಬಿಆರ್‌ಎಸ್, ಬಿಜೆಪಿ, ಎಐಎಂಐಎಂ ಪಕ್ಷಗಳು ನಮ್ಮ ಸಭೆಗಳಿಗೆ ಅಡ್ಡಿಪಡಿಸಿದಾಗ್ಯೂ ಸಭೆ ನಡೆಸಿದ್ದೇವೆ. ಎಷ್ಟೇ ಅಡ್ಡಿಗಳ ಮಧ್ಯೆ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಿಆರ್‌ಎಸ್ ಬಿಜೆಪಿಯ ಸಂಬಂಧಿ ಪಕ್ಷ, ಎಐಎಂಐಎಂ ನಾಯಕರ ಮೇಲೆ ಕೇಸ್ ಏಕಿಲ್ಲ: ರಾಹುಲ್ ಗಾಂಧಿ ಪ್ರಶ್ನೆ