ಪಿಥೋರಗಢ್(ಉತ್ತರಾಖಂಡ) : ಗಡಿ ಪ್ರದೇಶದಲ್ಲಿ ಚೀನಾ ಪ್ರತಿ ಬಾರಿ ಕ್ಯಾತೆ ತೆಗೆಯುವ ಕಾರಣ ಭಾರತೀಯ ಭದ್ರತಾ ಪಡೆಗಳು ಹೆಚ್ಚಿನ ನಿಗಾ ಮತ್ತು ತರಬೇತಿಗೆ ಒತ್ತು ನೀಡಿವೆ. ಲಿಪುಲೇಖ್ ಪಾಸ್ ಸಂಪರ್ಕಿಸುವ ಪೋಸ್ಟ್‌ಗಳಲ್ಲಿ ಸೈನಿಕರು ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರನ್ನು(ಐಟಿಬಿಪಿ) ಹೆಚ್ಚಿಸಲಾಗಿದೆ. ಇದರಲ್ಲಿ ಮಹಿಳಾ ಕಮಾಂಡೋಗಳನ್ನೂ ಸೇರಿಸಿಕೊಳ್ಳಲಾಗಿದೆ.
ಈ ಹಿಂದೆ ಹಿಮಚ್ಚಾದಿತ ಎತ್ತರದ ಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರು ಹಿಮಪಾತದ ಸಮಯದಲ್ಲಿ ತಗ್ಗು ಪ್ರದೇಶಗಳಿಗೆ ತೆರಳುತ್ತಿದ್ದರು. ಆದರೆ, ಇದೀಗ ತೀವ್ರ ಹಿಮದ ಮಧ್ಯೆಯೂ ಚೀನಾ ವಿರುದ್ಧ ಹೋರಾಡಲು ಭಾರತೀಯ ಸೈನಿಕರು ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದಾರೆ.
ಚೀನಾ ಮತ್ತು ನೇಪಾಳ ಗಡಿಯಲ್ಲಿರುವ ಎಲ್ಲಾ ಪೋಸ್ಟ್‌ಗಳಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸುವುದರ ಜೊತೆಗೆ, ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗಿದೆ. ಯುದ್ಧದ ಸಂದರ್ಭಗಳನ್ನು ಎದುರಿಸಲು ಮಿಲಿಟರಿ ಮತ್ತು ಅರೆಸೇನಾ ಪಡೆಗಳ ಸೈನಿಕರು ನಿರಂತರ ತರಬೇತಿ ಪಡೆಯುತ್ತಿದ್ದಾರೆ.
5 ಅಡಿ ಹಿಮಪಾತದಲ್ಲಿ ಗಸ್ತು : ಭಾರತೀಯ ಸೇನೆ ಮತ್ತು ಐಟಿಬಿಪಿ ಪಡೆ ಅದಮ್ಯ ಧೈರ್ಯ, ಶೌರ್ಯಕ್ಕೆ ಹೆಸರುವಾಸಿ. ಇಂತಹ ಭದ್ರತಾ ಪಡೆಯು 5 ಅಡಿ ಎತ್ತರದ ಹಿಮಪಾತದ ನಡುವೆಯೂ ಯೋಧರು ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಇಂಡೋ ಟಿಬೆಟಿಯನ್ ಪೊಲೀಸರನ್ನು ಹಿಮವೀರ್ ಎಂದು ಕರೆಯಲಾಗುತ್ತದೆ. ಚೀನಾ ಸೇನೆ ಈ ಭಾಗದಲ್ಲಿ ಕಿರಿಕ್ ಮಾಡುವುದನ್ನು ತಡೆಯಲು ಈ ರೀತಿಯ ತಾಲೀಮು ಅಗತ್ಯ ಎಂದು ಕಠಿಣ ಪರಿಸ್ಥಿತಿಯಲ್ಲೂ ತರಬೇತಿ ಪಡೆದುಕೊಳ್ಳಲಾಗುತ್ತಿದೆ.
ಲಿಪುಲೇಖ್ನಲ್ಲಿ ಮಹಿಳೆಯರ ನಿಯೋಜನೆ : ಲಿಪುಲೇಖ್ ಗಡಿಯಲ್ಲಿ 10 ಸಾವಿರದಿಂದ 17 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಪಡೆ ಹಗಲು-ರಾತ್ರಿ ಕಣ್ಗಾವಲು ಇಟ್ಟಿದ್ದಾರೆ. ಭಾರಿ ಹಿಮಪಾತವಾಗುತ್ತಿದ್ದರೂ ಇಲ್ಲಿ ಸೈನಿಕರು ತಾಲೀಮು ನಡೆಸುತ್ತಿದ್ದಾರೆ. ಇದರಲ್ಲಿ ಮಹಿಳಾ ಕಮಾಂಡೋಗಳು ಭಾಗಿಯಾಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಗಡಿ ಗಸ್ತಿಗೂ ಮಹಿಳೆಯರನ್ನು ನಿಯೋಜಿಸಲಾಗುತ್ತಿದೆ.
6 ತಿಂಗಳು ಹಿಮ ಮತ್ತು -45 ಡಿಗ್ರಿ ತಾಪಮಾನ : ಈ ಪ್ರದೇಶ ಹಿಮದಿಂದ ಕೂಡಿದ ಕಾರಣ 6 ತಿಂಗಳು ಇಲ್ಲಿ ಹಿಮಪಾತ ಮತ್ತು -45 ಡಿಗ್ರಿಯಷ್ಟು ತಾಪಮಾನ ಇರುತ್ತದೆ. ಐಟಿಬಿಪಿ ಸಿಬ್ಬಂದಿ ಮತ್ತು ಅಧಿಕಾರಿಗಳು -45 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೊರೆಯುವ ಚಳಿ, ಅಪಾಯಕಾರಿ ಹಿಮನದಿಗಳು ಮತ್ತು ನೈಸರ್ಗಿಕ ಅಪಾಯಗಳ ನಡುವೆಯೂ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ.
ಇದರ ಜೊತೆಗೆ ಕೈಲಾಸ ಮಾನಸ ಸರೋವರ ಯಾತ್ರೆಯ ವೇಳೆ ಬರುವ ಭಕ್ತರ ಜಬಾವ್ದಾರಿಯು ಕೂಡ ಇವರದೆಯಾಗಿರುತ್ತದೆ. ಹಿಮಾಲಯದ ಪ್ರದೇಶಗಳಲ್ಲಿ ಸಿಲುಕಿರುವ ಪರ್ವತಾರೋಹಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಕೂಡ ಐಟಿಬಿಪಿ ಆಗಾಗ್ಗೆ ಮಾಡುತ್ತಿರುತ್ತದೆ.
ಓದಿ: 2022ರ ಐಪಿಎಲ್ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಇಶಾನ್ ಕಿಶನ್