ನವದೆಹಲಿ: ಡೀಪ್‌ಫೇಕ್, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಂಡು ನಟಿಯರು ಮತ್ತು ಮಹಿಳೆಯರ ಚಿತ್ರಗಳನ್ನು ಅವಮಾನಕರ ರೀತಿಯಲ್ಲಿ ಬಳಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಠಿಣ ನಿರ್ಧಾರಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಸೂಚಿಸಿದೆ. ಸದ್ಯದಲ್ಲೇ ಜಾಲತಾಣಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, ಡೀಪ್‌ಫೇಕ್, ನಕಲಿ ಆಡಿಯೋ ಮತ್ತು ವಿಡಿಯೋಗಳನ್ನು ರಚಿಸಲು ಬಳಸುವ ಕೃತಕ ಬುದ್ಧಿಮತ್ತೆ ಬಳಕೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಜಾಲತಾಣಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ ಎಂದರು.
ಡೀಪ್‌ಫೇಕ್ ಈಗ ದೊಡ್ಡ ಸಮಸ್ಯೆ ಮಾರ್ಪಟ್ಟಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಿಗೆ ನೋಟಿಸ್ ನೀಡಿದ್ದೇವೆ. ಡೀಪ್‌ಫೇಕ್‌ಗಳನ್ನು ಗುರುತಿಸಲು, ಅವುಗಳನ್ನು ತಾಣದಿಂದ ತೆಗೆದುಹಾಕಲು ಸೂಚಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳೂ ಇದಕ್ಕೆ ಸ್ಪಂದಿಸಿದೆ. ಕ್ರಮ ಜಾರಿಯಲ್ಲಿದೆ. ಹೆಚ್ಚು ಜಾಗರೂಕತೆ ವಹಿಸಲೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಸೇಫ್ ಹಾರ್ಬರ್ ವಿನಾಯಿತಿ ರದ್ದು: ನಕಲಿ ವಿಡಿಯೋ, ಆಡಿಯೋಗಳನ್ನು ತಮ್ಮ ತಾಣಗಳಲ್ಲಿ ತೆಗೆದುಹಾಕದ ಸಂಸ್ಥೆಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಸಚಿವರು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ನೀಡಲಾಗಿರುವ 'ಸೇಫ್ ಹಾರ್ಬರ್' ವಿನಾಯಿತಿಯನ್ನು ರದ್ದು ಮಾಡಲಾಗುವುದು. ಹೆಚ್ಚಿನ ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು. ಇನ್ನೊಬ್ಬರ ಮಾನಹಾನಿಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಸೇಫ್ ಹಾರ್ಬರ್ ಸೌಲಭ್ಯ ಅನ್ವಯಿಸುವುದಿಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ: ರಶ್ಮಿಕಾ, ಕತ್ರಿನಾ ಆಯ್ತು; ಇದೀಗ ಬಾಲಿವುಡ್ ನಟಿ ಕಾಜೋಲ್ ಡೀಪ್‌ಫೇಕ್ ವಿಡಿಯೋ ವೈರಲ್
ಈಗಾಗಲೇ ಹಲವು ಸಾಮಾಜಿಕ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಇನ್ನೂ ಹೆಚ್ಚಿನ ಕ್ರಮ ಜಾರಿ ಮಾಡಬೇಕಿದೆ. ಸರ್ಕಾರ ಶೀಘ್ರದಲ್ಲೇ ಎಲ್ಲಾ ವೇದಿಕೆಗಳ ಸಭೆಯನ್ನು ಕರೆಯಲಿದೆ. ಬಹುಶಃ ಮುಂದಿನ 3- 4 ದಿನಗಳಲ್ಲಿ ಇದು ಸಾಧ್ಯವಾಗಲಿದೆ. ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ನಕಲಿ ಮಾಹಿತಿಗಳು ಕ್ಲೀನ್ ಆಗಬೇಕು ಎಂದು ಸಚಿವರು ಹೇಳಿದರು. ಸಭೆಗೆ ಮೆಟಾ ಮತ್ತು ಗೂಗಲ್‌ನಂತಹ ಸಂಸ್ಥೆಗಳನ್ನು ಕರೆಯಲಾಗುತ್ತದೆಯೇ ಎಂಬ ಪ್ರಶ್ನೆಗೆ ಸಚಿವರು ಹೌದು ಎನ್ನುವಂತೆ ಉತ್ತರಿಸಿದರು.
ಏನಿದು ಡೀಪ್‌ಫೇಕ್ ವಿವಾದ: ಪ್ರಮುಖ ನಟ, ನಟಿಯರನ್ನು ಗುರಿಯಾಗಿಸಿಕೊಂಡು ಹಲವಾರು 'ಡೀಪ್‌ಫೇಕ್' ವೀಡಿಯೊಗಳು ವೈರಲ್ ಆಗಿವೆ. ಇದು ಒಬ್ಬರ ಮುಖವನ್ನು ಇನ್ಯಾರದ್ದೋ ದೇಹಕ್ಕೆ ಅಂಟಿಸಿ ಮಾನಹಾನಿ ಮಾಡುವ ಕೆಲಸಗಳು ನಡೆದಿವೆ. ನಕಲಿ ಮಾಹಿತಿ, ವಿಡಿಯೋಗಳು ತಂತ್ರಜ್ಞಾನದ ದುರುಪಯೋಗದ ತೀವ್ರ ಕಳವಳ ವ್ಯಕ್ತವಾಗಿದೆ. ತಾವು ಕೂಡ ಕೃತಕ ಬುದ್ಧಿಮತ್ತೆ(ಎಐ)ಯ ಸಂತ್ರಸ್ತ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೊಂಡಿದ್ದರು. ತಮ್ಮ ಧ್ವನಿಯನ್ನು ಬಳಸಿ ಹಲವು ಹಾಡುಗಳನ್ನು ರಚಿಸಲಾಗಿದೆ. ಇದು ಆತಂಕಕಾರಿ ವಿಚಾರ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: 'ಡೀಪ್‌ಫೇಕ್' ಹಾವಳಿ: ಪ್ರಧಾನಿ ಮೋದಿ ಎಚ್ಚರಿಕೆಯೇನು?