ನವದೆಹಲಿ: ದೇಶದಲ್ಲಿ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದರಿಂದ ಮತ್ತೊಂದು ಅಲೆಯ ಊಹಾಪೋಹಗಳು ಎದ್ದಿವೆ. ಈಗ ಉಲ್ಬಣಗೊಂಡ ಪ್ರಕರಣ ಸಂಖ್ಯೆ ಅನಿರೀಕ್ಷಿತವಲ್ಲ. ಇದು ದೇಶದಲ್ಲಿ ನಾಲ್ಕನೇ ಅಲೆಗೆ ದಾರಿ ಮಾಡಿಕೊಡಬಹುದು. ಆದರೆ, ಇದು ಪ್ರಸ್ತುತ ಕೆಲವು ರಾಜ್ಯಗಳಿಗೆ ಸೀಮಿತವಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಏಪ್ರಿಲ್ ಆರಂಭವಾದಗಿನಿಂದ ದೇಶದಲ್ಲಿ ಪ್ರತಿದಿನ ಸುಮಾರು 1 ಸಾವಿರ ಕೋವಿಡ್ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಅದರಲ್ಲೂ, ಸೋಮವಾರ ದೇಶಾದ್ಯಂತ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏಕಾಏಕಿ ಶೇ.90ರಷ್ಟು ಏರಿಕೆಯಾಗಿತ್ತು. ಅಂದರೆ ಸೋಮವಾರ ಒಂದೇ ದಿನ - 2,183 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇದು ದಿನಗಳಲ್ಲೇ ದಾಖಲಾದ ಅತಿ ಹೆಚ್ಚಾಗಿತ್ತು. ಆದರೆ, ಮರು ದಿನ ಎಂದರೆ ಮಂಗಳವಾರ 1,247 ಪ್ರಕರಣಗಳು ವರದಿಯಾಗಿವೆ.
ಓಮಿಕ್ರಾನ್ ರೂಪಾಂತರಿ ಬಿಎ.2 ಪರಿಣಾಮದಿಂದ ದೇಶದಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗಿದೆ. ಜಾಗತಿಕವಾಗಿ ಸಹ ಚೀನಾ, ಹಾಂಕಾಂಗ್, ಅಮೆರಿಕ ಮತ್ತು ಯುರೋಪಿನ ಹಲವಾರು ದೇಶಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಕೊಚ್ಚಿಯ ಅಮೃತಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ದೀಪು ಟಿಎಸ್ ಹೇಳಿದ್ದಾರೆ.
ಕಳೆದ ಮೂರು ದಿನಗಳಲ್ಲಿ ವಿಶೇಷವಾಗಿ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಇದು ಮುಂದಿನ ಅಲೆಯ ಪ್ರಾರಂಭ ಸೂಚಿಸುತ್ತದೆ. ಮುಂದಿನ ಅಲೆ ಎದುರಿಸುವುದು ಅನಿವಾರ್ಯವಾಗಿದ್ದರೂ ಅದರ ತೀವ್ರತೆ ಮತ್ತು ಪ್ರಮಾಣ ಸೌಮ್ಯವಾಗಿರುತ್ತದೆ. ಆದ್ದರಿಂದ ಜನತೆ ಭಯಭೀತರಾಗುವುದಕ್ಕಿಂತ ಸೋಂಕನ್ನು ತಡೆಗಟ್ಟುವಿಕೆಯ ಮುನ್ನೆಚ್ಚರಿಕೆ ಬಗ್ಗೆ ಗಮನ ಕೊಡುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಐದು ರಾಜ್ಯಗಳಿಗೆ ಪತ್ರ: ಇತ್ತ, ಶಾಲಾ ಕಾಲೇಜುಗಳು ಆರಂಭವಾಗಿದೆ. ಅತ್ತ, ಕೋವಿಡ್ ಹಾವಳಿ ಪ್ರಾರಂಭದ ನಂತರ ಮೊದಲ ಬಾರಿಗೆ ಇದೇ ಏಪ್ರಿಲ್ನಿಂದ ಹಲವಾರು ರಾಜ್ಯ ಸರ್ಕಾರಗಳು ಮಾಸ್ಕ್ ಕಡ್ಡಾಯ ಎಂಬ ಆದೇಶವನ್ನು ಹಿಂಪಡೆದಿವೆ. ಈ ನಡುವೆ ಇತ್ತೀಚೆಗೆ ಸೋಂಕಿನ ಪ್ರಕರಣಗಳು ಅಧಿಕವಾದ ಮಹಾರಾಷ್ಟ್ರ, ಕೇರಳ, ಮಿಜೋರಾಂ, ದೆಹಲಿ ಮತ್ತು ಹರಿಯಾಣ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದು, ಆಯಾ ರಾಜ್ಯಗಳು ಎಚ್ಚರಿಕೆ ವಹಿಸಲು ಹಾಗೂ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ವೈದ್ಯರಿಂದ ಬೇರೆ-ಬೇರೆ ಅಭಿಪ್ರಾಯ: ಕಳೆದ ಎರಡು ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ನಿಜ. ಆದಾಗ್ಯೂ, ಇದು ದೇಶದ ಎರಡ್ಮೂರು ರಾಜ್ಯಗಳಲ್ಲಿ ಇದು ಅಧಿಕಾಗಿದೆ. ನಿರ್ದಿಷ್ಟವಾಗಿ ದೆಹಲಿ ಮತ್ತು ಹರಿಯಾಣದ ಕೊಂಚ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇದನ್ನು ಮತ್ತೊಂದು ಅಲೆ ಎಂದು ಭಾವಿಸುವುದಕ್ಕಿಂತ ಕೆಲ ಪ್ರದೇಶಗಳಲ್ಲಿ ಉಲ್ಬಣಗೊಂಡಿದೆ ಎನ್ನಬಹುದು ಎಂದು ರಾಷ್ಟ್ರೀಯ ಕೋವಿಡ್ ಟಾಸ್ಕ್ಪೋರ್ಸ್ ಸದಸ್ಯರಾದ ಮುಂಬೈನ ಆಸ್ಪತ್ರೆಯ ಕ್ರಿಟಿಕಲ್ ಕೇರ್ ನಿರ್ದೇಶಕ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ.
ಡಾ.ರಾಹುಲ್ ಪಂಡಿತ್ ಹೇಳಿಕೆಗೆ ಕಾನ್ಪುರ ಐಐಟಿಯ ಪ್ರೊ.ಮನೀಂದ್ರ ಅಗರವಾಲ್ ಸಹ ಧ್ವನಿಗೂಡಿಸಿದ್ದಾರೆ. ಆದರೆ, ಗುರಗಾಂವ್‌ನ ಮೇದಾಂತ ಆಸ್ಪತ್ರೆಯ ಡಾ.ಸುಶೀಲಾ ಕಟಾರಿಯಾ, ಈಗ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳು ನಾವು ನಾಲ್ಕನೇ ಅಲೆಯತ್ತ ಸಾಗುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವುದನ್ನು ಸೂಚಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅದರ ಪ್ರಮಾಣ ತೀವ್ರವಾಗಿರುವುದಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹ ಸೀಮಿತವಾಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಸಣ್ಣ ಮಕ್ಕಳಿಗೆ ಒಮಿಕ್ರಾನ್ ಸೋಂಕು ಅಪಾಯಕಾರಿ: ಹೃದಯಾಘಾತಕ್ಕೂ ಕಾರಣ..