ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮರ್ಯಾದೆ ಹತ್ಯೆ, ಶಿಕ್ಷಣ ನಿರಾಕರಣೆ, ಹೆಣ್ಣು ಭ್ರೂಣ ಹತ್ಯೆ ಈ ರೀತಿಯ ನಾನಾ ತರಹದ ಹಿಂಸೆಗಳಿಗೆ ಅದೆಷ್ಟೋ ಹೆಣ್ಣು ಜೀವಗಳು ಬಲಿಯಾಗುತ್ತಿವೆ. ಇಷ್ಟೆಲ್ಲ ಅನಾಚಾರಗಳು ನಡೆಯುತ್ತಿದ್ದರೂ ಆಕೆಗೊಂದು ದಿನವಿದೆ. ಅದೇ ಅಂತಾರಾಷ್ಟ್ರೀಯ ಮಹಿಳಾ ದಿನ.
ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವದ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ, ಜನಾಂಗೀಯ, ಭಾಷಾ, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಯಾವುದೇ ವಿಭಾಗಗಳನ್ನು ಪರಿಗಣಿಸದೆ ಮಹಿಳೆಯರು ತಮ್ಮ ಸಾಧನೆಗಳಿಗಾಗಿ ಗುರುತಿಸಲ್ಪಟ್ಟ ದಿನವಾಗಿದೆ. ಆರಂಭಿಕ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಮಹಿಳೆಯರು ಜಾಗತಿಕವಾಗಿ ಹೊಸ ಆಯಾಮವನ್ನು ಪಡೆದುಕೊಳ್ಳಲು ಸಹಕಾರಿಯಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಹಕ್ಕು ಮತ್ತು ರಾಜಕೀಯ ಹಾಗೂ ಆರ್ಥಿಕ ರಂಗಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಬೆಂಬಲಿಸುವ ಸಲುವಾಗಿ ಆಚರಿಸಲಾಗುತ್ತದೆ.
ಇತಿಹಾಸ:
ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 1911 ರಲ್ಲಿ ಮಾರ್ಚ್ 19 ರಂದು ನಡೆಯಿತು. ರ‍್ಯಾಲಿಗಳು ಮತ್ತು ಸಂಘಟಿತ ಸಭೆಗಳನ್ನು ಒಳಗೊಂಡ ಉದ್ಘಾಟನಾ ಕಾರ್ಯಕ್ರಮವು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ಡ್ನಂಥ ದೇಶಗಳಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಮಾರ್ಚ್ 19ನ್ನು ಆಯ್ಕೆ ಮಾಡಲು ಕಾರಣವೆಂದರೆ, 1848 ರಲ್ಲಿ ಪ್ರಶ್ಯನ್ ರಾಜ ಮಹಿಳೆಯರಿಗೆ ಮತವನ್ನು ಚಲಾಯಿಸುವ ಹಕ್ಕು ನೀಡುವ ಭರವಸೆ ನೀಡಿದ್ದ. ಬಳಿಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 1913 ರಲ್ಲಿ ಮಾರ್ಚ್ 8ಕ್ಕೆ ಆಚರಿಸುವಂತೆ ಸೂಚಿಸಲಾಯಿತು. ಯುಎನ್ 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ವರ್ಷಕ್ಕೆ ಕರೆ ನೀಡುವ ಮೂಲಕ ಮಹಿಳೆಯರ ಕಾಳಜಿಗೆ ಜಾಗತಿಕ ಗಮನ ಸೆಳೆಯಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ "ಮಹಿಳಾ ದಿನ" ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನವಾಗಿದೆ.
21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು ಇದೀಗ ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಟ್ಟಿದ್ದಾಳೆ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರಿಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.
ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನ 2021ರ ಮಹತ್ವ:
ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿನ ಇದು. ಈ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ತೋರಿಸುವ ದಿನವಾಗಿದೆ.
2030 ರ ವೇಳೆಗೆ ಲಿಂಗ ಸಮಾನತೆ:
ಅಂತಾರಾಷ್ಟ್ರೀಯ ಮಹಿಳಾ ದಿನವು ದೇಶಗಳು ಮತ್ತು ಸಮುದಾಯಗಳ ಇತಿಹಾಸದಲ್ಲಿ ಅಸಾಧಾರಣ ಪಾತ್ರವನ್ನು ವಹಿಸಿರುವ ಸಾಮಾನ್ಯ ಮಹಿಳೆಯರ ಪ್ರಗತಿಯನ್ನು ಪ್ರತಿಬಿಂಬಿಸುವ, ಬದಲಾವಣೆಗೆ ಕರೆ ನೀಡುವ ಮತ್ತು ಧೈರ್ಯ ಹಾಗೂ ದೃಢ ನಿಶ್ಚಯದ ಕಾರ್ಯಗಳನ್ನು ಆಚರಿಸುವ ಸಮಯವಾಗಿದೆ. ಜಗತ್ತು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ, ಆದರೆ ಯಾವುದೇ ದೇಶವು ಲಿಂಗ ಸಮಾನತೆಯನ್ನು ಸಾಧಿಸಿಲ್ಲ. ಈ ಮಧ್ಯೆ ಕೆಲವು ಕಾನೂನುಗಳು 2.7 ಶತಕೋಟಿ ಮಹಿಳೆಯರು ಪುರುಷರು ಮಾಡುವ ಕೆಲಸಗಳಿಗೆ ಪ್ರವೇಶಿಸಲು ಅವಕಾಶ ಮಾಡಿ ಕೊಟ್ಟಿವೆ. 2019 ರ ಹೊತ್ತಿಗೆ ಸಂಸತ್ ಸದಸ್ಯರಲ್ಲಿ ಶೇ 25 ಕ್ಕಿಂತ ಕಡಿಮೆ ಮಹಿಳೆಯರು. ಮೂವರು ಮಹಿಳೆಯರಲ್ಲಿ ಒಬ್ಬರು ಲಿಂಗ ಆಧಾರಿತ ಹಿಂಸಾಚಾರವನ್ನು ಅನುಭವಿಸುತ್ತಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಭಾರತ ಸರ್ಕಾರದ ಕ್ರಮಗಳು:
- ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ
- ಜಾಗತಿಕ ಉದ್ಯಮಶೀಲತೆ ಶೃಂಗಸಭೆಯು ಮಹಿಳೆಯರ ಮೇಲೆ ಕೇಂದ್ರೀಕರಿಸಿದೆ
- 26 ವಾರಗಳವರೆಗೆ ಹೆರಿಗೆ ರಜೆ
- ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ
- ಪುರುಷ ರಕ್ಷಕರಿಲ್ಲದೆ ಮುಸ್ಲಿಂ ಮಹಿಳೆಯರಿಗೆ ಹಜ್ ಹೋಗಲು ಅವಕಾಶವಿದೆ
- ತಲಕ್ ಕಾನೂನು ನಿಷೇಧ
- ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ
- ಸ್ಟ್ಯಾಂಡ್ ಅಪ್ ಸ್ಕೀಮ್
- ಮುದ್ರಾ ಸಾಲ
- ಉಜ್ವಲಾ ಯೋಜನೆ
- ಮಹಿಳಾ ಶಕ್ತಿ ಕೇಂದ್ರ ಯೋಜನೆ
- ಸುಕನ್ಯಾ ಸಮೃದ್ಧಿ ಯೋಜನೆ
- ಮಹಿಳೆಯರಿಗೆ ಶೌಚಾಲಯ
- ಮಹಿಲಾ-ಇ-ಹಾತ್
- ಮಹಿಳಾ ಹಾಸ್ಟೆಲ್
- ಮಹಿಳೆಯರಿಗಾಗಿ ತರಬೇತಿ ಮತ್ತು ಉದ್ಯೋಗ ಕಾರ್ಯಕ್ರಮಕ್ಕೆ ಬೆಂಬಲ (ಎಸ್‌ಟಿಇಪಿ)
ಮಹಿಳೆಯರ ಬಗೆಗಿನ ಕೆಲವು ಸಂಗತಿಗಳು:
1. ಮಹಿಳೆಯರು ಜಾಗತಿಕವಾಗಿ ಪುರುಷರಿಗಿಂತ ಶೇ 23ರಷ್ಟು ಕಡಿಮೆ ಗಳಿಸುತ್ತಾರೆ.
2. ಕಳೆದ ವರ್ಷದ ಮಾರ್ಚ್ 2019 ರ ಪ್ರಕಾರ ಮಾನ್ಸ್ಟರ್ ಸಂಬಳ ಸೂಚ್ಯಂಕ ಸಮೀಕ್ಷೆಯು ಭಾರತದಲ್ಲಿ ಪ್ರಸ್ತುತ ಲಿಂಗ ವೇತನದ ಅಂತರವು ಶೇ 19ರಷ್ಟಿದೆ ಎಂದು ಸೂಚಿಸುತ್ತದೆ. ಪುರುಷರಿಗೆ (ರೂ. 242.49) ಮಹಿಳೆಯರಿಗೆ (ರೂ.196.3) ಸಿಗಲಿದ್ದು, 46.19 ರೂ. ವ್ಯತ್ಯಾಸವಿದೆ ಎಂದು ತಿಳಿದುಬಂದಿದೆ.
3. ವಿಶ್ವಾದ್ಯಂತ ಮಹಿಳೆಯರು ಕೇವಲ ಶೇ 24ರಷ್ಟು ಸಂಸದೀಯ ಸ್ಥಾನಗಳನ್ನು ಹೊಂದಿದ್ದಾರೆ.
4. ಇದರಲ್ಲಿ ಭಾರತದ ಸರಾಸರಿ ಶೇ 12ರಷ್ಟು ಮಾತ್ರ. ರುವಾಂಡಾದಲ್ಲಿ ಶೇ 63.8 ರಷ್ಟು ಮಹಿಳಾ ಸಂಸದರು, ನೇಪಾಳದಲ್ಲಿ ಶೇ 29.5, ಅಫ್ಘಾನಿಸ್ತಾನದಲ್ಲಿ ಶೇ 27.7, ಚೀನಾದಲ್ಲಿ ಶೇ 23.6ರಷ್ಟಿದೆ.
5. ವಿಶ್ವ ಆರ್ಥಿಕ ವೇದಿಕೆಯ ಲಿಂಗ ವ್ಯತ್ಯಾಸ ವರದಿಯಲ್ಲಿ ಚೀನಾ (106), ಶ್ರೀಲಂಕಾ (102), ನೇಪಾಳ (101), ಬ್ರೆಜಿಲ್ (92), ಇಂಡೋನೇಷ್ಯಾ (85) ಮತ್ತು ಬಾಂಗ್ಲಾದೇಶ (50) ಗಿಂತ ಭಾರತ ಕೆಳಗಿದೆ.
2020ರ ಭಾರತದ ಟಾಪ್ 10 ಮಹಿಳಾ ಉದ್ಯಮಿಗಳು:
1. ವಂದನಾ ಲುಥ್ರಾ- ವಿಎಲ್‌ಸಿಸಿ ಸ್ಥಾಪಕಿ
2.ಫಾಲ್ಗುನಿ ನಾಯರ್- ನೈಕಾ ಸ್ಥಾಪಕಿ
3. ರಿತು ಕುಮಾರ್- ಫ್ಯಾಷನ್ ಡಿಸೈನರ್
4. ಕಿರಣ್ ಮಜುಂದಾರ್ ಶಾ- ಬಯೋಕಾನ್ ಲಿಮಿಟೆಡ್ ಸ್ಥಾಪಕಿ
5. ಶ್ರದ್ಧಾ ಶರ್ಮಾ- ಫೌಂಡರ್ ಆಫ್ ಇವರ್ಸ್ಟೋರಿ
6. ಅದಿತಿ ಗುಪ್ತಾ- ಕೋ ಫೌಂಡರ್ ಆಫ್ ಮೆಸ್ಟ್ರುಯೇಷನ್
7. ಶುಭ್ರಾ ಚಡ್ಡಾ- ಚುಂಬಕ್, ಸಹ-ಸ್ಥಾಪಕಿ ಮತ್ತು ಉತ್ಪನ್ನಗಳ ಮುಖ್ಯಸ್ಥೆ
8.ಸುಪ್ರಿಯಾ ಪೌಲ್- ಜೋಶ್ ಟಾಕ್ಸ್ ಸ್ಥಾಪಕಿ
9. ರಾಧಿಕಾ ಘೈ ಅಗರ್ವಾಲ್ - ಸಹ-ಸ್ಥಾಪಕಿ ಮತ್ತು ಸಿಎಮ್ಒ, ಶಾಪ್‌ಕ್ಲೂಸ್.ಕಾಮ್
10.ಶಹನಾಜ್ ಹುಸೇನ್ - ಶಹನಾಜ್ ಹರ್ಬಲ್ಸ್, ಸಿಇಒ
ಹೆಣ್ಣು ಎಷ್ಟೆ ಗಟ್ಟಿಗಳಾಗಿದ್ದರೂ ನೋವಿಗೆ ಕರಗುತ್ತಾಳೆ. ಕಷ್ಟಕ್ಕೆ ಮರುಗುತ್ತಾಳೆ. ತನ್ನೊಳಗಿನ ಮೃದು ಮನಸ್ಸಿಗೆ ಸೋಲುತ್ತಾಳೆ. ತಾಯಿಯಾಗಿ ಪೋಷಿಸುತ್ತಾಳೆ. ಹೂವಿನ ಮೃದು ಎಸಳಿನಂತೆ ಅವಳ ಮನಸ್ಸು. ಹೆಣ್ಣೆಂದರೆ ಹಾಗೇ.. ಅವಳು ಈ ಸೃಷ್ಟಿಯ ಕೊಡುಗೆ. ಹೆಣ್ಣು ಯಾರ ಗುಲಾಮಳು ಅಲ್ಲ ಅವಳನ್ನೂ ಸಮಾನವಾಗಿ ಗೌರವಿಸುವ ಮೂಲಕ ಈ ದಿನಾಚರಣೆಗೊಂದು ಅರ್ಥ ನೀಡಬೇಕು. ಎಲ್ಲಾರಿಗೂ ಹ್ಯಾಪಿ ವುಮೆನ್ಸ್ ಡೇ.