ಫೆಬ್ರುವರಿ 21 'ವಿಶ್ವ ಮಾತೃಭಾಷಾ ದಿನ'. ಬಹುಭಾಷೆ ಮತ್ತು ಬಹುಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾವಜೀವಿಯಾದ ಮಾನವ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇತರರೊಂದಿಗೆ ಹಂಚಿಕೊಳ್ಳಲು ಸಂವಹನ ಅಗತ್ಯ. ಇದಕ್ಕೆ ಚಂದದ ಸೇತುವೆಯೇ ಭಾಷೆ. ಈ ದಿನವನ್ನು ಜಗತ್ತಿನಾದ್ಯಂತ ಇರುವ ಭಾಷಾ ವೈವಿಧ್ಯತೆಯ ಅರಿವು ಮೂಡಿಸಲು ಮತ್ತು ಅದನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ.
ಚಂದದ ಸೇತುವೆ ಭಾಷೆ: ಎಷ್ಟೇ ಭಾಷೆ ಕಲಿತರೂ ಮೂಲ ಯೋಚನೆಗಳೆಲ್ಲ ರೂಪುಗೊಳ್ಳುವುದು ಮಾತೃಭಾಷೆಯಲ್ಲಿ. ಚಂದದ ಭಾವನೆಗಳು ಹುಟ್ಟಿ, ಅವು ಮಾತಿನ ಅನುಭೂತಿಗೆ ನಿಲುಕುವುದು ಮಾತೃ ಭಾಷೆಯಲ್ಲಿ. ಹಾಗಾಗಿ ತಾಯ್ನುಡಿ ಎನ್ನುವುದು ಹೃದಯದ ಭಾಷೆ. ಮಾತೃಭಾಷೆಯೆಂದರೆ ತಾಯಿಯ ಭಾಷೆ ಎಂದು ಅರ್ಥೈಸಿಕೊಳ್ಳುವುದಕ್ಕಿಂತಲೂ ಮಗು ತನ್ನ ಬಾಲ್ಯದಲ್ಲಿ ತಂದೆ ತಾಯಿಯಿಂದ, ಮನೆಯವರಿಂದ ಹಾಗೂ ಆಪ್ತ ವಲಯದಲ್ಲಿ ರೂಢಿಸಿಕೊಳ್ಳುವ, ತಾನು ವಿಕಸನಗೊಂಡಂತೆ ತನ್ನೊಂದಿಗೆ ಬೆಳೆಯುತ್ತ ಹೋಗುವ ಭಾಷೆಯೇ ಮಾತೃಭಾಷೆ. ಮಗು ತನ್ನ ಬಾಲ್ಯಾವಸ್ಥೆಯಲ್ಲಿ ಕಲಿಯುವ ಭಾಷೆ ಎಂದು ಅರ್ಥೈಸಬಹುದು.
ಇಂದು ಇಡೀ ವಿಶ್ವ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತಿದೆ. ಬೇರೆ ಬೇರೆ ಭಾಷೆಗಳ ಒಳಹರಿವಿನ ನಡುವೆ ಮಾತೃಭಾಷೆಗೆ ಧಕ್ಕೆಯಾಗುತ್ತಿರುವ ಬಗ್ಗೆ ಶಿಕ್ಷಣ ಕ್ಷೇತ್ರ ಆತಂಕಕ್ಕೆ ಒಳಗಾಗಿದೆ. ಇಂದು ಜಾಗತಿಕ ಭಾಷೆಯ ಟ್ರೆಂಡ್ ಹೆಚ್ಚಾಗುತ್ತಿರುವ ನಡುವೆ ಮಾತೃಭಾಷೆಯನ್ನು ಅರಿಯದೆ ನಿರ್ಲಕ್ಷಿಸಿರುವುದು ಎಲ್ಲರಿಗೂ ತಿಳಿದಿದೆ. ಮಾತೃಭಾಷೆಗೆ ಏನು ಅಪಾಯ?, ಅದರಿಂದ ಮಾತೃಭಾಷೆಯನ್ನು ಉಳಿಸುವುದು ಹೇಗೆ ಎಂದು ಜಗತ್ತಿನ ದೇಶಗಳು ಇಂದು ಚಿಂತನೆ ನಡೆಸುತ್ತಿವೆ.
ಮಾತೃಭಾಷಾ ದಿನಾಚರಣೆಯ ಆರಂಭ: ಇಂದು ಪ್ರಪಂಚದಾದ್ಯಂತ 7 ಸಾವಿರಕ್ಕೂ ಹೆಚ್ಚು ಭಾಷೆಗಳು ಅಸ್ತಿತ್ವದಲ್ಲಿವೆ. ಅದರಲ್ಲಿ ಅರ್ಧದಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಜನರಲ್ಲಿ ಮಾತೃಭಾಷೆಯ ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ಮಾತೃಭಾಷೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಫೆಬ್ರವರಿ 21, 2000ರಿಂದ 'ಅಂತಾರಾಷ್ಟ್ರೀಯ ಮಾತೃಭಾಷಾ ದಿನ'ವನ್ನು ಆಚರಿಸಲು ಆರಂಭಿಸಲಾಯಿತು. ಆಂಗ್ಲ ಭಾಷೆಯ ಕುರುಡು ಓಟದಲ್ಲಿ ಇಡೀ ಜಗತ್ತಿನ ಮಾತೃಭಾಷೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮಾತೃಭಾಷೆಯ ಮಹತ್ವವನ್ನು ಹೆಚ್ಚಿಸಿ ಇಡೀ ಜಗತ್ತಿಗೆ ಅರಿವು ಮೂಡಿಸಲು ಈ ದಿನವನ್ನು ಸಮರ್ಪಿಸಲಾಗಿದೆ.
ಮಾತೃಭಾಷೆ ಮಗು ಕಲಿಯುವ ಮೊದಲ ಭಾಷೆ. ಭಾಷೆ ಎನ್ನುವುದು ಪ್ರತಿಯೊಂದು ಸಂಸ್ಕೃತಿಯ ಅಸ್ತಿಭಾರ. ಜಾಗತೀಕರಣ ವೇಗವಾಗಿ ಆವರಿಸುತ್ತಿದೆ. ಎಲ್ಲೆಲ್ಲೂ ನಿರರ್ಗಳ ಇಂಗ್ಲಿಷ್ ಬೆನ್ನೇರುವ ಧಾವಂತ. ಮಾತೃಭಾಷೆ ಹುಟ್ಟಿನಿಂದ ಮಗು ತನ್ನದಾಗಿಸಿಕೊಳ್ಳುವ ಭಾಷೆ. ಮಕ್ಕಳು ಆಡುತ್ತಾ, ನೋಡುತ್ತಾ, ಮೈಗೂಡಿಸಿಕೊಳ್ಳುವ ಸಂವಹನದ ಬುನಾದಿ. ಮಾತೃಭಾಷೆಯಲ್ಲಿ ರೂಢಿಸಿಕೊಂಡ ಕೌಶಲಗಳು ಮಕ್ಕಳಿಗೆ ಮರೆಯದಂತೆ ನಾಟಿರುತ್ತವೆ. ನೆಲ್ಸನ್ ಮಂಡೇಲಾ 'ಒಬ್ಬನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅವನ ತಲೆಗೆ ಸಲ್ಲುವುದು. ಅದೇ ಅವನ ಭಾಷೆಯಲ್ಲಿ ಮಾತನಾಡಿದರೆ ಆತನ ಹೃದಯಕ್ಕೆ ಸಲ್ಲುತ್ತದೆ' ಎಂದಿದ್ದಾರೆ.
'ಅಂತರರಾಷ್ಟ್ರೀಯ ಮಾತೃಭಾಷೆ ದಿನ': ಜಾಗತಿಕ ಮಟ್ಟದಲ್ಲಿ ಶೇ.40ರಷ್ಟು ಜನರಿಗೆ ಅವರು ಮಾತನಾಡದ ಅಥವಾ ಅರ್ಥವಾಗದ ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿದೆ. ಮಾತೃಭಾಷೆ ಆತ್ಮವಿಶ್ವಾಸದ ಪ್ರತೀಕ. ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವಲ್ಲಿ ಮಾತೃಭಾಷೆಗೆ ಪರ್ಯಾಯವಿಲ್ಲ ಎಂಬುದನ್ನು ಮನಗಂಡ ಯುನೆಸ್ಕೊ, 'ಮಾತೃಭಾಷಾ ಮಾಧ್ಯಮ'ವನ್ನು ಎತ್ತಿ ಹಿಡಿದಿದೆ. ಹಾಗಾಗಿ ಅದು ಫೆ.21ರಂದು 'ಅಂತರರಾಷ್ಟ್ರೀಯ ಮಾತೃಭಾಷೆ ದಿನ' ಎಂದು ಘೋಷಿಸಿದೆ. ಜಗತ್ತಿನ ಭಾಷಾ ವೈವಿಧ್ಯದ ಪರಂಪರೆಗೆ ಚ್ಯುತಿಯಾಗದಂತೆ ತಾಯಿ ನುಡಿಯ ಹಿರಿಮೆ ಮನಗಾಣಬೇಕು ಎಂಬ ಯುನೆಸ್ಕೊ ಮಾರ್ಗದರ್ಶನ ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿದೆ. ಇಲ್ಲಿ ಜರ್ಮನಿಯ ರಾಜನೀತಿ ತಜ್ಞ ಜಿ.ಸ್ಟ್ರೇಸಿಮನ್ ಅವರ 'ಮಾತೃಭಾಷೆ ಆತ್ಮದ ಅಂತರಂಗದ ಅಭಯಧಾಮ' ಎಂಬ ನುಡಿ ಹೃದಯಸ್ಪರ್ಶಿ. ಮಗು ಬೆಳೆಯುವುದು ತಾಯಿಯ ಮಡಿಲಿನಲ್ಲಿ. ಹಾಗಾಗಿ ಆಕೆ ಅನ್ಯೋನ್ಯವಾಗಿಸುವ ಮಾತನ್ನು ಮಾತೃಭಾಷೆ ಎನ್ನುವರು.
ಮಾತೃಭಾಷೆಯಲ್ಲಿ ಶಿಕ್ಷಣ: ವಿಶ್ವ ಮಾತೃಭಾಷಾ ದಿನದಂದು ಇಂದು ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸುವುದು ಸಹಜ. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಸ್ವತಃ ಗಾಂಧಿ ನಂಬಿದ್ದರು. ಒಬ್ಬ ವ್ಯಕ್ತಿಗೆ ಶಿಕ್ಷಣದ ಕೊರತೆಯಿದ್ದರೆ ಅವನು ತನ್ನ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಿಲ್ಲ ಎಂದು ಭಾವಿಸಲಾಗುತ್ತದೆ. ಇದಲ್ಲದೆ, ರಾಷ್ಟ್ರಪಿತ ನನಗೆ ಇಂಗ್ಲಿಷ್ ಇಷ್ಟವಿಲ್ಲ, ಆದರೂ ಇಂಗ್ಲಿಷ್ ಭಾಷೆಯ ಬಗ್ಗೆ ನನಗೆ ಗೌರವವಿದೆ, ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಇತರ ಭಾಷೆಗಳೊಂದಿಗೆ ಸರಿಯಾದ ನ್ಯಾಯವನ್ನು ನೀಡಿದರೆ, ಚಿನ್ನದ ವಾಸನೆಯ ಸೌಹಾರ್ದತೆ ಎಂದು ಹೇಳುತ್ತಿದ್ದರು. ದರಿಂದ ಇಡೀ ಜಗತ್ತಿನ ಮಾತೃಭಾಷೆಗಳು ಸಂರಕ್ಷಿಸಲ್ಪಡುತ್ತವೆ ಮತ್ತು ಅವುಗಳನ್ನು ವಿನಾಶದಿಂದ ರಕ್ಷಿಸಲು ಯಾವುದೇ ದಿನವನ್ನು ಆಚರಿಸುವ ಅಗತ್ಯವಿಲ್ಲ.
ಸ್ವದೇಶಿ ಭಾಷೆಗೆ ರಕ್ಷಣೆ ಎಲ್ಲರ ಹೊಣೆ: ವಿಶ್ವದ ಒಟ್ಟು 7 ಸಾವಿರ ಭಾಷೆಗಳ ಪೈಕಿ 3 ಸಾವಿರ ಭಾಷೆಗಳು ಈ ಶತಮಾನದ ಕೊನೆಗೆ ನಶಿಸುವ ಆತಂಕವಿದೆ. ಭಾರತದಲ್ಲಿ ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿನ ಕೋರೋ ಎಂಬ ಭಾಷೆ ಅಳಿಯುತ್ತಿದೆ. ಮಾಸಿ ಎಂಬುದು ಸಿಕ್ಕೀಂ ರಾಜ್ಯದ ಒಂದು ಸ್ಥಳೀಯ ಭಾಷೆ. ಅದನ್ನು ಮಾತನಾಡುವವರ ಸಂಖ್ಯೆ ಕೇವಲ 4. ಅವರು ಗ್ಯಾಂಗ್ಟಕ್‍ನಲ್ಲಿರುವ ಒಂದೇ ಕುಟುಂಬದವರು. ಇಂಡೊನೇಷ್ಯಾದಲ್ಲಿ 136 ಭಾಷೆಗಳಿದ್ದು, ಶೇ.80ರಷ್ಟು ಭಾಷೆಗಳು ಆಡುವವರಿಲ್ಲದೆ ಮರೆಯಾಗುತ್ತಿವೆ. ಮಲೇಷಿಯಾದಲ್ಲಿ ಸುಮಾರು 707 ಭಾಷೆಗಳಿವೆ. ಆದರೆ ಅರ್ಧದಷ್ಟು ಅಳಿವಿನ ಅಂಚಿನಲ್ಲಿವೆ. ವಿಶ್ವದಾದ್ಯಂತ ಹಲವಾರು ಮಾತೃಭಾಷೆಗಳು ಅವಸಾನದ ಅಂಚು ತಲುಪಿವೆ ಎಂದು ವರದಿಯಾಗಿದೆ.
15 ದಿನಗಳಿಗೊಂದು ಸ್ವದೇಶಿ ಭಾಷೆ ನಶಿಸುತ್ತಿದೆ. ಸ್ವದೇಶಿ ಭಾಷೆ ಅವಸಾನವಾದರೆ ಒದಗುವ ನಷ್ಟ ಅಪಾರ. ಜ್ಞಾನ, ಅನುಭವ, ಗಿರಿಕಂದರಗಳ ವಿವರ, ಸಮುದಾಯದ ಪ್ರಜ್ಞೆ, ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಮಾಹಿತಿ, ಅನನ್ಯ ಪ್ರಾಪಂಚಿಕ ದೃಷ್ಟಿ ಎಲ್ಲವೂ ಕಳೆದುಹೋಗುತ್ತವೆ. ಇನ್ನು ಮುಂದಿನ ಪೀಳಿಗೆಗಳಿಗೆ ರವಾನೆಯಾಗುವ ಅರಿವೇನು? ಸಾಹಿತ್ಯವೇನು? ಹಾಡು-ಹಸೆ ಏನು?ಅಂತರ್ಜಾತಿ ವಿವಾಹದ ಕಾರಣದಿಂದ ತಂದೆ, ತಾಯಿಯ ಭಾಷೆಗಳು ಭಿನ್ನವೇ ಇರಲಿ. ಆದರೆ ಮಕ್ಕಳ ಹಿತದೃಷ್ಟಿಯಿಂದ ಯಾವುದಾದರೂ ಒಂದು ಭಾಷೆ ಮಾತೃಭಾಷೆಯಾಗಬಹುದಲ್ಲ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಮಾತೃಭಾಷೆಯಲ್ಲಿ ಮಾತನಾಡುವ, ಕಥೆ ಹೇಳುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು. ಇದರಿಂದ ಭಾಷೆಗಳ ಅಳಿವಿಗೆ ಬಹುಮಟ್ಟಿಗೆ ಲಗಾಮು ಬೀಳುವುದು.
ಅಂತಾರಾಷ್ಟ್ರೀಯ ಮಾತೃಭಾಷಾ ದಿನ 2023-ಥೀಮ್: ಅಂತಾರಾಷ್ಟ್ರೀಯ ಮಾತೃಭಾಷಾ ದಿನದ 24ನೇ ಆವೃತ್ತಿಯು 'ಬಹುಭಾಷಾ ಶಿಕ್ಷಣ - ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ' ಎಂಬ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. "ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು" ಎಂಬುವುದಾಗಿದೆ.
ಅಂತಾರಾಷ್ಟ್ರೀಯ ಮಾತೃಭಾಷಾ ದಿನ 2023: ಸಂದೇಶಗಳು
-ನಮ್ಮ ಮಾತೃಭಾಷೆಯು ನಮಗೆ ನಮ್ಮ ಗುರುತನ್ನು ನೀಡುತ್ತದೆ ಮತ್ತು ನಾವು ಯಾವಾಗಲೂ ಅದರ ಬಗ್ಗೆ ಹೆಮ್ಮೆಪಡಬೇಕು.
-ಅಂತರಾಷ್ಟ್ರೀಯ ಮಾತೃಭಾಷಾ ದಿನದ ಸಂದರ್ಭ ನಮಗೆಲ್ಲರಿಗೂ ಮಾತೃಭಾಷೆಯನ್ನು ತುಂಬಾ ಸುಂದರವಾಗಿಸುವ ವಿಶೇಷತೆಯನ್ನು ನೆನಪಿಸುತ್ತದೆ.
-ಭಾಷೆಯು ಪರಸ್ಪರ ಸಂವಹನ ನಡೆಸುವ ಒಂದು ಮಾರ್ಗವಾಗಿರಬಹುದು, ಆದರೆ ಮಾತೃಭಾಷೆಯು ನಮ್ಮ ಸಂಸ್ಕೃತಿಯೊಂದಿಗೆ ನಮ್ಮನ್ನು ಸಂಪರ್ಕಿಸುವ ವಿಷಯವಾಗಿದೆ.
-ನಾವು ಅನೇಕ ಹೊಸ ಭಾಷೆಗಳನ್ನು ಕಲಿಯಬಹುದು ಆದರೆ ನಮ್ಮ ಹೃದಯಕ್ಕೆ ಬಹಳ ಹತ್ತಿರವಾದದ್ದು ಮಾತೃಭಾಷೆ.
-ನಾವು ಒಗ್ಗೂಡಿ ಈ ಅದ್ಭುತ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಮಾಡಲು ನಮ್ಮ ಮಾತೃಭಾಷೆಗೆ ಹೆಚ್ಚು ಅರ್ಹವಾದ ಗೌರವ ಮತ್ತು ಗಮನವನ್ನು ನೀಡೋಣ.
-ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಆಚರಣೆಗಳು ನಮ್ಮನ್ನು ವಿಭಿನ್ನವಾಗಿಸುವ ಮಾತೃಭಾಷೆಯ ಮೇಲಿನ ಗೌರವ ಮತ್ತು ಪ್ರೀತಿಯಿಂದ ತುಂಬಿರಲಿ.
-ನೀವು ಕನಿಷ್ಠ ಎರಡು ಭಾಷೆಯನ್ನು ಅರ್ಥಮಾಡಿಕೊಳ್ಳದ ಹೊರತು ನೀವು ಎಂದಿಗೂ ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ - ಜೆಫ್ರಿ ವಿಲ್ಲನ್
- ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ. ನಮ್ಮ ಆಲೋಚನೆಗೂ ಮತ್ತು ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ-ಕೆ. ಪಿ ಪೂರ್ಣಚಂದ್ರ ತೇಜಸ್ವಿ.
ಭಾಷೆಯು ನಿಮ್ಮನ್ನು ವ್ಯಕ್ತಪಡಿಸಲು ಒಂದು ಮಾರ್ಗವೆಂದು ವ್ಯಾಖ್ಯಾನಿಸಲಾಗಿದೆ ಮತ್ತು ಮಾತೃಭಾಷೆಯು ನಮ್ಮ ವಿಶಿಷ್ಟ ಸಂಸ್ಕೃತಿಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಎಲ್ಲರಿಗೂ ಅಂತರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು.
ಇದನ್ನೂ ಓದಿ: ಇಂದು ವಿಶ್ವ ಮಾತೃಭಾಷಾ ದಿನ: ಜಗತ್ತಿನಲ್ಲಿವೆ 6 ಸಾವಿರಕ್ಕೂ ಹೆಚ್ಚು ಭಾಷೆ