ನವದೆಹಲಿ: ಉತ್ತರ ಭಾರತದಲ್ಲಿ ಶೀತ ಗಾಳಿ ಜನವರಿ 2 ರವರೆಗೆ ಮುಂದುವರಿಯಲಿದ್ದು, ಮುಂದಿನ ವಾರದಿಂದ ಇದು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಪೂರ್ವ ರಾಜಸ್ಥಾನ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್ ಹಾಗೂ ಹರಿಯಾಣದಲ್ಲಿ ಜನವರಿ 2 ಮತ್ತು ಜನವರಿ 6 ರ ನಡುವೆ ಲಘು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ತೀವ್ರವಾದ ಶೀತ ಗಾಳಿಯು ಜ.7 ರಿಂದ ಮತ್ತೆ ಉತ್ತರ ಭಾರತವನ್ನು ಅಪ್ಪಳಿಸುವ ಸಾಧ್ಯತೆಯಿದೆ" ಎಂದು ಐಎಂಡಿ ಹಿರಿಯ ವಿಜ್ಞಾನಿ ಆರ್.ಕೆ.ಜೆನಮಣಿ ಹೇಳಿದರು. ಇನ್ನು ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ಗುರುವಾರ ದಾಖಲಾದ ಕನಿಷ್ಠ ತಾಪಮಾನವು 3.3 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಡಿಸೆಂಬರ್ 12 ರ ನಂತರ ಪಶ್ಚಿಮ ಹಿಮಾಲಯನ್ ಪ್ರದೇಶದ ಮೇಲೆ ಹೊರಗಿನ ಅಡಚಣೆಗಳು ಹೆಚ್ಚಾಗಿ ಪರಿಣಾಮ ಬೀರಿವೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದ ಮೇಲೆ ಗಮನಾರ್ಹ ಹಿಮಪಾತ ಮತ್ತು ಮಳೆಯಾಗುವಂತೆ ಮಾಡಿತ್ತು. ಹಾಗಾಗಿ ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಿಂದ ದೆಹಲಿ ಎನ್‌ಸಿಆರ್ ಕಡೆಗೆ ಮತ್ತಷ್ಟು ಗಾಳಿ ಬೀಸುವ ಸಾಧ್ಯತೆ ಇದೆ, ಎಂದು ನವದೆಹಲಿಯ ಐಎಂಡಿಯ ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿದರು.
ಪಂಜಾಬ್ ಮತ್ತು ಹರಿಯಾಣದಲ್ಲಿರುವ ಮಂಜು ದೆಹಲಿಯ ಕಡೆಗೆ ಚಲಿಸುವ ಗಾಳಿಯ ಶೀತವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಎಂದು ಶ್ರೀವಾಸ್ತವ ಹೇಳಿದರು.