ಖಮ್ಮಂ (ತೆಲಂಗಾಣ): ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳಾ ಇಂಜಿನಿಯರ್ ಕುಟುಂಬಕ್ಕೆ ವಿಮಾ ಕಂಪನಿ 1.75 ಕೋಟಿ ಪರಿಹಾರ ನೀಡಲು ಶುಕ್ರವಾರ ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಪ್ಪಿಕೊಂಡಿದೆ. ವಿದ್ಯುತ್ ಸರಬರಾಜು ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿನಂದನಾ ಶ್ರವಂತಿ ಎಂಬುವರು 2019 ಜೂನ್ 24 ರಂದು ಸಹೋದ್ಯೋಗಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಾದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಅವರ ಕುಟುಂಬ ಚಿಕಿತ್ಸೆಗಾಗಿ ರೂ.10 ಲಕ್ಷ ಖರ್ಚು ಮಾಡಿತ್ತು.
ಕಾರು ವಿಮಾ ಕಂಪನಿ 'ರಾಯಲ್ ಸುಂದರಂ' ಪರಿಹಾರವಾಗಿ 3 ಕೋಟಿ ರೂಪಾಯಿ ಹಣ ನೀಡಬೇಕು ಎಂದು ಶ್ರವಂತಿ ಕುಟುಂಬ ಸದಸ್ಯರು ಖಮ್ಮಂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಮೃತ ಮಹಿಳಾ ಕುಟುಂಬದ ಪರ ವಾದ ಮಂಡಿಸಿದ ವಕೀಲರು, ಮೃತ ಶ್ರವಂತಿ ಮಾಸಿಕ ರೂ.1.29 ಲಕ್ಷ ಸಂಪಾದಿಸುತ್ತಿದ್ದು, ಸೇವೆಯ ಕಾಲಮಿತಿ ಹೆಚ್ಚಿಗೆ ಇದ್ದುದರಿಂದ ಅಧಿಕ ಮೊತ್ತದ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಕೋರಿದ್ದರು.
ಲೋಕ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಪಡಿಸುವಂತೆ ಜಿಲ್ಲಾ ನ್ಯಾಯಾಧೀಶ ಜಗಜೀವನ್ ಕುಮಾರ್ ಸೂಚಿಸಿದ್ದರು. ಅದರಂತೆ ರಾಯಲ್ ಸುಂದರಂ ವಿಮಾ ಕಂಪನಿ ಮೃತರ ಕುಟುಂಬಕ್ಕೆ 1.75 ಕೋಟಿ ರೂ. ನೀಡುವುದಾಗಿ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಡಿ. ರಾಮಪ್ರಸಾದರಾವ್ ಸಮ್ಮುಖದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಪ್ಪಿಕೊಂಡಿದೆ.
ಪ್ರತ್ಯೇಕ ಪ್ರಕರಣ- ಗುಜರಾತ್ನಲ್ಲಿ 5.40 ಕೋಟಿ ಪರಿಹಾರ: ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಗುಜರಾತ್ ಹೈಕೋರ್ಟ್ ಆದೇಶದ ಮೇರೆಗೆ ವಿಮಾ ಕಂಪನಿ 5.40 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಇಫ್ಕೋ ಟೋಕಿಯೊ ಎಂಬ ವಿಮಾ ಕಂಪನಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿತ್ತು. ಇದು ಅತಿ ಹೆಚ್ಚಿನ ಮೊತ್ತದ ಮೋಟಾರ್ ಕ್ಲೇಮ್ ಇತ್ಯರ್ಥವಾಗಿತ್ತು.
ಪ್ರಕರಣದ ಹಿನ್ನೆಲೆ: 2014ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭರೂಚ್‌ನ ಪ್ರಕಾಶ್‌ಭಾಯ್ ವಘೇಲಾ ಎಂಬುವರ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಪರಿಹಾರ ಕೋರಿ ಮೋಟಾರ್ ಕ್ಲೈಮ್ಸ್ ಟ್ರಿಬ್ಯೂನಲ್ಗೆ ಅರ್ಜಿ ಸಲ್ಲಿಸಿದ್ದರು. ಮೃತ ಬಿ.ಟೆಕ್ ಪದವೀಧರರಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ವಾರ್ಷಿಕ 31 ಲಕ್ಷ ರೂಪಾಯಿ ಸಂಬಳವಿತ್ತು. ಮೃತ ವ್ಯಕ್ತಿಗೆ ಪತ್ನಿ, ಇಬ್ಬರು ಅಪ್ರಾಪ್ತ ಪುತ್ರರು ಮತ್ತು ಪೋಷಕರು ಇದ್ದರು. ಇಡೀ ಕುಟಂಬ ಅವರ ಆದಾಯದ ಮೇಲೆ ಅವಲಂಬಿತವಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಮೋಟಾರ್ ಕ್ಲೈಮ್ಸ್ ಟ್ರಿಬ್ಯೂನಲ್, ಶೇಕಡಾ 9 ರ ಬಡ್ಡಿ ದರದಲ್ಲಿ 6.31 ಕೋಟಿ ರೂ.ಗಳ ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ, ಇಷ್ಟು ದೊಡ್ಡ ಪ್ರಮಾಣದ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕಂಪನಿ ವಾದ ಮಂಡಿಸಿತ್ತು. ಹಲವು ಸುತ್ತಿನ ಮಾತುಕತೆ ಬಳಿಕ ವಿಮಾ ಕಂಪನಿ ಸಂತ್ರಸ್ತ ಕುಟುಂಬಕ್ಕೆ 5.40 ಕೋಟಿ ರೂಪಾಯಿ ಪಾವತಿಸಲು ಒಪ್ಪಿಕೊಂಡಿತ್ತು.
ಇದನ್ನೂ ಓದಿ: ಲೋಕ ಅದಾಲತ್ನಲ್ಲಿ 24 ಲಕ್ಷ ಪ್ರಕರಣಗಳ ಇತ್ಯರ್ಥ, 1420 ಕೋಟಿ ರೂ. ಪರಿಹಾರ ವಿತರಣೆ