ಶ್ರೀಕಾಕುಲಂ: ಕಾರು ಚಾಲನೋರ್ವ ಮಹಿಳೆ ಮತ್ತು ಆಕೆಯ ಪತಿಯ ಶವವನ್ನು ಮಾರ್ಗ ಮಧ್ಯೆ ರಸ್ತೆ ಪಕ್ಕದಲ್ಲೇ ಇಳಿಸಿ ಹೋದ ಅಮಾನವೀಯ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನ ತೆಕ್ಕಲಿಯಲ್ಲಿ ನಡೆದಿದೆ.
ಕಾರು ಚಾಲಕನ ಅಮಾನವೀಯ ನಡೆಯಿಂದ ರಸ್ತೆ ಪಕ್ಕದಲ್ಲೇ ಪತಿಯ ಶವ ಇಟ್ಟುಕೊಂಡು ಮಹಿಳೆ ಗಂಟೆಗಟ್ಟಲೇ ಕಾದಿದ್ದಾಳೆ. ಬಳಿಕ ವಿಷಯ ಅರಿತು ಅಲ್ಲಿನ ಪೊಲೀಸ್ ಠಾಣೆಯ ಎಸ್ಐ ಕಾಮೇಶ್ವರ್ ರಾವ್ ಅವರು ಮಂಗಳವಾರ ರಾತ್ರಿ ಸ್ಥಳಕ್ಕೆ ಬಂದು, ಮಹಿಳೆಗೆ ಬೇರೆ ವಾಹನದ ವ್ಯವಸ್ಥೆ ಮಾಡಿ ಕಳಿಸಿ ಕೊಟ್ಟಿದ್ದಾರೆ.
ಓಡಿಸ್ಸಾ ಮೂಲದ ಮಹಿಳೆ ಅಂಜಲಿ ಅವರ ಪತಿ ಪ್ರದೀಪ್ ಕುಮಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತೆಯೇ ಹೈದರಾಬಾದ್ನಿಂದ ಭುವನೇಶ್ವರದಲ್ಲಿರುವ ಆಸ್ಪತ್ರೆಗೆ ಪತಿಯನ್ನು ದಾಖಲಿಸಲು ಬಾಡಿಗೆ ಕಾರಿನಲ್ಲಿ ಅಂಜಲಿ ಕರೆದೊಯ್ಯುತ್ತಿದ್ದರು. ಆದ್ರೆ ಮಾರ್ಗ ಮಧ್ಯೆ ಶ್ರೀಕಾಕುಲಂ ಬಳಿ ಮಹಿಳೆಯ ಪತಿ ಮೃತಪಟ್ಟಿದ್ದಾನೆ. ವಿಷಯ ಅರಿತ ಟ್ಯಾಕ್ಸಿ ಚಾಲಕ ಅಲ್ಲೇ ವಾಹನ ನಿಲ್ಲಿಸಿ, ಪತಿಯ ಶವದ ಜೊತೆ ಮಹಿಳೆಯನ್ನು ಒತ್ತಾಯ ಮಾಡಿ ಕೆಳಗಿಳಿಸಿ ಹೋಗಿದ್ದಾನೆ.
ಬಳಿಕ ಪತಿಯ ಶವದ ಜೊತೆ ಮಹಿಳೆ ಬೇರೆ ವಾಹನಕ್ಕಾಗಿ ಗಂಟೆಗಟ್ಟಲೇ ಕಾದಿದ್ದು, ನಂತರ ಅಲ್ಲಿನ ಎಸ್ಐ ನೆರವಿನಿಂದ ಓಡಿಸ್ಸಾಗೆ ಹೋಗಿದ್ದಾರೆ.