ನೆಲ್ಲೂರು(ಆಂಧ್ರ ಪ್ರದೇಶ): ದಿನದಿಂದ ದಿನಕ್ಕೆ ಮಾನವೀಯತೆ ಮರೆಯಾಗುತ್ತಿದೆ. ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡ ದುಃಖದಲ್ಲಿರುವವರಿಗೆ ಪ್ರಜ್ಞಾಪೂರ್ವಕವಾಗಿ ಸಹಾಯ ಮಾಡುವುದನ್ನು ಬಿಟ್ಟು ಹಣ, ನಿಯಮಗಳೆಂದು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಮಗು ಶವವನ್ನು ಸಾಗಿಸದೇ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಸಂಗಮದಲ್ಲಿ ನಡೆದಿದೆ.
ಏನಿದು ಘಟನೆ: ಬುಧವಾರ ಶ್ರೀರಾಮ್ (8) ಮತ್ತು ಈಶ್ವರ್ (10) ಎಂಬ ಇಬ್ಬರು ಬಾಲಕರು ಸಂಗಮದಲ್ಲಿರುವ ಕನಿಗಿರಿ ಜಲಾಶಯದ ಮುಖ್ಯ ಕಾಲುವೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಬಾಲಕರಿಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಅವರು ಮುಗಳುತ್ತಿರುವುದನ್ನು ಕಂಡ ಸ್ಥಳೀಯರು ಕಾಪಾಡಲು ನೀರಿಗೆ ಹಾರಿದ್ದಾರೆ. ಈ ವೇಳೆ ಈಶ್ವರ್ ಮತ್ತು ಶ್ರೀರಾಮ್ನನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಆದ್ರೆ ಈಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆ ಬಾಲಕನ ಶವವನ್ನು ಮನೆಗೆ ಕೊಂಡೊಯ್ಯಲಾಯಿತು. ಶ್ರೀರಾಮನನ್ನು ನೀರಿನಿಂದ ಹೊರತೆಗೆದ ನಂತರ ಸ್ಥಳೀಯರು ಮತ್ತು ಸಂಬಂಧಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದರು. ಆದ್ರೆ ಶ್ರೀರಾಮ್ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
108 ವಾಹನದ ಸಿಬ್ಬಂದಿಗೆ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ಅಂತಾ ಪೋಷಕರು ಮನವಿ ಮಾಡಿದ್ದಾರೆ. ಆದ್ರೆ ಅವರು ಬರಲು ನಿರಾಕರಿಸಿದರು. ಕಾರು ಮತ್ತು ಇತರೆ ವಾಹನಗಳು ಸೇರಿದಂತೆ ಆಟೋ ಸಹ ಮುಂದೆ ಬರಲಿಲ್ಲ. ಬಳಿಕ ತಂದೆಯೇ ತನ್ನ ಮಗ ಶ್ರೀರಾಮನ ಶವವನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಬಂದರು.
ಬಾಲಕನ ಶವವನ್ನು ಸಾಗಿಸಲು ಆಟೋದವರು ಹಿಂದೇಟು ಹಾಕಿದ್ದಾರೆ. ಇದು ಒಳ್ಳೆಯ ಪದ್ಧತಿ ಅಲ್ಲ. ಆಟೋದವರು ಸಹ ಪ್ರಜಾ ಸೇವಕರೇ. ಇಂತಹ ಸಮಯದಲ್ಲಿ ಸಹಾಯ ಮಾಡಬೇಕು. ಇನ್ಮುಂದೆ ಇಂತಹ ಸಂದರ್ಭದಲ್ಲಿ ಯಾರಾದ್ರೂ ನಿರಾಕರಿಸಿದ್ರೆ ಕಾನೂನು ಕ್ರಮ ಜರುಗಿಸುತ್ತೇವೆ. ಈ ಘಟನೆ ಮೇಲೆ ಪೋಷಕರು ದೂರು ನೀಡಿದ್ರೆ, ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡುತ್ತೇವೆ ಎಂದು ಬುಚ್ಚಿರೆಡ್ಡಿಪಾಲೆಂ ಸರ್ಕಲ್ ಇನ್ಸ್ಪೆಕ್ಟರ್ ಕೋಟೆಶ್ವರರಾವ್ ಹೇಳಿದ್ದಾರೆ.