ನವದೆಹಲಿ: ಸ್ನೇಹಿತನೊಂದಿಗೆ ಮೊಬೈಲ್ನಲ್ಲಿ ಚಾಟ್ ಮಾಡುತ್ತಿದ್ದ ಸಹೋದರಿಯ ವಿರುದ್ಧ ಕೋಪಗೊಂಡ 17 ವರ್ಷದ ಸಹೋದರ ಪಿಸ್ತೂಲಿನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ. ಇಲ್ಲಿನ ಈಶಾನ್ಯ ದೆಹಲಿ ಭಾಗದಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಸಹೋದರಿಯ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ ಮನೆಯಲ್ಲಿ ಸಹೋದರಿ ಸ್ನೇಹಿತನೊಂದಿಗೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುತ್ತಿರುವುದನ್ನು ಕಂಡು ಆ ಸಂಬಂಧ ಗಲಾಟೆ ಮಾಡಿದ್ದಾನೆ. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಸಿಟ್ಟಿಗೆದ್ದ ಬಾಲಕ ನಾಡ ಪಿಸ್ತೂಲಿನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ.
ಬಾಲಕ ತನ್ನ ಸ್ನೇಹಿತರೊಬ್ಬರಿಂದ ಅಕ್ರಮ ಪಿಸ್ತೂಲ್ ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೊದಲು ತನ್ನ ಸಹೋದರಿ, ಹುಡುಗನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಮತ್ತು ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುವುಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ಆದರೆ ಹುಡುಗಿ ತನ್ನ ಸ್ನೇಹಿತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ. ಗುರುವಾರ ಬೆಳಗ್ಗೆ ಆ ಹುಡುಗನೊಂದಿಗೆ ಚಾಟ್ ಮಾಡುವಾಗ ಆರೋಪಿ ಮತ್ತೆ ಸಹೋದರಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಪಿಸ್ತೂಲಿನಿಂದ ಸಹೋದರಿಯ ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ ಎಂದು ಡಿಸಿಪಿ ವೇದ್ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.