ನವದೆಹಲಿ: ಯಾವುದೇ ಪದವಿಯೊಂದಿಗೆ ಅನುಮತಿ ಇಲ್ಲದೇ ಶಸ್ತ್ರ ಚಿಕಿತ್ಸೆ ನಡೆಸಿ ರೋಗಿಯ ಸಾವಿಗೆ ಕಾರಣರಾದ ನಕಲಿ ವೈದ್ಯರ ದಂಧೆಯನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಚಾರಗಳು ಪೊಲೀಸರ ತನಿಖೆಯಿಂದ ಹೊರಬಂದಿದೆ.
ಬಂಧನವಾಗಿರುವ ನಾಲ್ವರು ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿನ ಅಗರ್ವಾಲ್ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ನಕಲಿ ವೈದ್ಯರಿಂದಾದ ಶಸ್ತ್ರ ಚಿಕಿತ್ಸೆ ನಂತರ ರೋಗಿಗಳು ಸಾವನ್ನಪ್ಪಿದ ದೂರಿನ ಮೇರೆಗೆ ಪೊಲೀಸರು ಮೂವರು ನಕಲಿ ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಇವರು ಪದವಿ ಇಲ್ಲದ ನಕಲಿ ವೈದ್ಯರು ಎಂಬುದು ಬಯಲಿಗೆ ಬಂದಿದೆ. ಲ್ಯಾಬ್ ಟೆಕ್ಶಿಯನ್ ಮಹೇಂದರ್ ಸಿಂಗ್, ಡಾ. ನೀರಜ್ ಅಗರ್ವಾಲ್(ವೈದ್ಯ ಹೌದು ಆದರೆ ಸರ್ಜನ್ ಅಲ್ಲ) ಮತ್ತು ಡಾ. ಪೂಜಾ ಅಗರ್ವಾಲ್, ಡಾ. ಜಸ್ಪ್ರೀತ್ ಸಿಂಗ್ ಬಾಜ್ವಾ ಆರೋಪಿಗಳು.
ಪ್ರಕರಣದ ಹಿನ್ನೆಲೆ: ಅಕ್ಟೋಬರ್ 10, 2022 ರಂದು ಸಂಗಮ್ ವಿಹಾರ್‌ನ ಮಹಿಳೆಯೊಬ್ಬರು ದೆಹಲಿ ಪೊಲೀಸ್ ಠಾಣೆಯಲ್ಲಿ ಅಗರ್‌ವಾಲ್ ಮೆಡಿಕಲ್ ಸೆಂಟರ್ ವಿರುದ್ಧ ತನ್ನ ಪತಿಯ ಸಾವಿನ ಬಗ್ಗೆ ದೂರು ದಾಖಲಿಸಿದ್ದರು. ದೂರಿನಲ್ಲಿ,' ಸೆಪ್ಟೆಂಬರ್ 19-2022 ರಂದು ಪತಿ ಅಸ್ಗರ್ ಅಲಿ ಅವರಿಗೆ ಪಿತ್ತಕೋಶದ ಕಲ್ಲು ಕಾಣಿಸಿಕೊಂಡಿದ್ದು ಅದರ ಆಪರೇಷನ್ಗೆ ಅಗರ್ವಾಲ್ ಮೆಡಿಕಲ್ ಸೆಂಟರ್‌ಗೆ ದಾಖಲಾಗಿದ್ದರು. ಮೊದಲು ಆರೋಪಿ ಡಾ. ಜಸ್ಪ್ರೀತ್ ಸಿಂಗ್ ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಎಂದು ಮತ್ತೊಂದು ಆರೋಪಿಯಾದ ಡಾ. ನೀರಜ್ ಅಗರ್ವಾಲ್ ಹೇಳಿದ್ದ. ಆದರೆ, ಶಸ್ತ್ರಚಿಕಿತ್ಸೆಯ ವೇಳೆಗೆ ಜಸ್ಪ್ರೀತ್ ಸಿಂಗ್ ಅವರಿಗೆ ಬೇರೆ ತುರ್ತು ಕೆಲಸ ಇದ್ದು ಆಪರೇಷನ್ ಅನ್ನು ವೈದ್ಯರಾದ ಡಾ. ಮಹೇಂದರ್ ಸಿಂಗ್ ಮತ್ತು ಡಾ. ಪೂಜಾ ಅಗರ್ವಾಲ್ ನಡೆಸುತ್ತಾರೆ ಎಂದು ನೀರಜ್ ಹೇಳಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆ ನಡೆದ ಬಳಿಕ ಆಕೆಯ ಪತಿಗೆ ತೀವ್ರವಾದ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಪತಿ ಅಸ್ಗರ್ ಅಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿತ್ತು. ಇದರಿಂದ ವೈದ್ಯರು ಎಂದು ಹೇಳಿಕೊಂಡಿದ್ದ ಮಹೇಂದರ್ ಸಿಂಗ್ ಮತ್ತು ಡಾ. ಪೂಜಾ ಅಗರ್ವಾಲ್ ನಕಲಿ ವೈದ್ಯರು ಎಂದು ಪತ್ತೆಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ದೂರಿನ ಆಧಾರದ ಮೇರೆಗೆ, ಗ್ರೇಟರ್ ಕೈಲಾಶ್ನ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಯಿತು. ದೂರಿನ ಆವೃತ್ತಿಯಲ್ಲೇ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಖ್ಯಾತ ಸರ್ಜನ್ ಡಾ. ಜಸ್ಪ್ರೀತ್ ಸಿಂಗ್ ಮೃತ ಅಸ್ಗರ್ ಅಲಿಯ ಶಸ್ತ್ರ ಚಿಕಿತ್ಸೆಯ ವೇಳೆ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ, ಮೃತನ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿ ಡಾ. ಜಸ್ಪ್ರೀತ್ ಸಿಂಗ್ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದ ಎಂಬುದು ಬೆಳಕಿಗೆ ಬರುತ್ತದೆ.
ಅಲ್ಲದೇ ಮುಂದಿನ ತನಿಖೆಯ ಸಂದರ್ಭದಲ್ಲಿ, ಈಗಾಗಲೇ ಅಗರ್ವಾಲ್ ಮೆಡಿಕಲ್ ಸೆಂಟರ್ ವಿರುದ್ಧ ದೆಹಲಿ ಮೆಡಿಕಲ್ ಕೌನ್ಸಿಲ್ಗೆ ಏಳು ದೂರುಗಳನ್ನು ಸಲ್ಲಿಸಲಾಗಿದೆ ಎಂಬುದು ತಿಳಿಯುತ್ತದೆ. 2016 ರಿಂದ ಇಲ್ಲಿವರೆಗೆ ವಿವಿಧ ರೋಗಿಯು ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರುದಾರಿಂದ ಮಾಹಿತಿ ಪಡೆದಿದ್ದಾರೆ. ಇದೇ ವರ್ಷದ ಅಕ್ಟೋಬರ್ 27 ರಂದು ನಾರಾಯಣ್ ಎಂಬ ಇನ್ನೊಬ್ಬ ರೋಗಿಗೆ ಪಿತ್ತಕೋಶದ ಕಲ್ಲು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಸಾವನ್ನಪ್ಪಿದ್ದರು.
ಈ ಎಲ್ಲ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಮತ್ತು ವೈದ್ಯಕೀಯ ಕೇಂದ್ರವನ್ನು ನವೆಂಬರ್ 1 ರಂದು ತನಿಖೆ ಮಾಡಿ ಪರೀಕ್ಷಿಸಲಾಯಿತು. ಈ ವೇಳೆ ಹಲವು ನ್ಯೂನತೆಗಳು ಕಂಡು ಬಂದಿದೆ. ಜತೆಗೆ ಡಾ. ನೀರಜ್ ಅಗರ್ವಾಲ್ ಪದೇ ಪದೆ ರೋಗಿಗಳ ಚಿಕಿತ್ಸೆ/ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆ ಸಾವನ್ನಪ್ಪಿದ್ದ ಅಸ್ಗರ್ ಅಲಿ ಶವಪರೀಕ್ಷೆ ವರದಿಯು ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿಯಿಂದ ಉಂಟಾಗುವ ತೊಂದರೆಗಳಿಂದಾಗಿ ಹೆಮರಾಜಿಕ್ ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಎಲ್ಲ ಮಾಹಿತಿ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ. ಬಂಧನದ ನಂತರ ಡಾ.ನೀರಜ್ ಅಗರ್ವಾಲ್ ದೆಹಲಿಯ ಹತ್ತಕ್ಕೂ ಹಲವು ಆಸ್ಪತ್ರೆಗಳಲ್ಲಿ ಏಜೆಂಟರನ್ನು ಹೊಂದಿದ್ದ ಎಂಬುದಾಗಿ ತಿಳಿದು ಬಂದಿದೆ. ಈತ ಹೊಂದಿದ್ದ ಏಜೆಂಟರು ತಮ್ಮ ಆಸ್ಪತ್ರೆಗೆ ಬರುವ ರೋಗಿಗಳನ್ನು ಅಗರ್ವಾಲ್ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುತ್ತಿದ್ದ. ಇದಕ್ಕೆ ನೀರಜ್ ಅಗರ್ವಾಲ್ ತನ್ನ ಏಜೆಂಟ್ಗೆ ಹಣ ನೀಡುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ವಿಚಾರಗಳು ಹೊರ ಬರಬೇಕಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ್ದ ನಾಲ್ವರು ವೈದ್ಯರ ಬಂಧನ