ಪಿತೋರಗಢ (ಉತ್ತರಾಖಂಡ): ಭಾರತ-ಚೀನಾ ಗಡಿಭಾಗವಾದ ಉತ್ತರಾಖಂಡದ ಪಿತೋರಗಢ ಜಿಲ್ಲೆಯಲ್ಲಿ ಹಣದುಬ್ಬರ ಹೆಚ್ಚಳವಾಗಿದೆ. ಹಣದುಬ್ಬರ ಹೆಚ್ಚಾದರೆ ಸರಕು - ಸಾಮಗ್ರಿಗಳ ಬೆಲೆಯೂ ಏರಿಕೆಯಾಗುತ್ತದೆ. ಅದರಂತೆ ಇದೀಗ ಪಿತೋರಗಢ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಉಪ್ಪು ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳನ್ನು ಎಂಟು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಈ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಮುಚ್ಚಲಾಗಿದ್ದು, ಪರಿಣಾಮ ಎತ್ತರದ ಹಿಮಾಲಯದ ಪ್ರದೇಶಗಳಲ್ಲಿನ ಹತ್ತಾರು ಹಳ್ಳಿಗಳಲ್ಲಿ ಹಣದುಬ್ಬರವು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. 20 ರೂ. ಇರುವ ಕೇವಲ ಒಂದು ಕೆಜಿ ಉಪ್ಪಿನ ಪ್ಯಾಕೆಟ್ಗೆ ಜನರು ಬರೊಬ್ಬರಿ 130 ರೂಪಾಯಿ ಪಾವತಿಸಬೇಕಿದೆ.
ಸಕ್ಕರೆ- ಹಿಟ್ಟಿನ ಬೆಲೆ ಕೇಳುವಂತೆಯೇ ಇಲ್ಲ!
ಸಕ್ಕರೆ ಮತ್ತು ಹಿಟ್ಟನ್ನು ಪ್ರತಿ ಕೆಜಿಗೆ 150 ರೂ. ನಂತೆ ಮಾರಾಟ ಮಾಡಲಾಗುತ್ತಿದ್ದು, ಕೆಜಿ ಸಾಸಿವೆ ಎಣ್ಣೆಯನ್ನು 275 ರೂ. ನಿಂದ 300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಒಂದು ಕೆಜಿ ಅಕ್ಕಿಗೆ 150 ರೂ., ಕೆಜಿ ಈರುಳ್ಳಿಗೆ 125 ರೂ. ಹಣ ಕೊಟ್ಟು ಖರೀದಿಸಬೇಕಿದೆ.
ಇದನ್ನೂ ಓದಿ: ಮಹಾತ್ಮರ 'ಉಪ್ಪಿನ ಸತ್ಯಾಗ್ರಹ': ದೇಶದಲ್ಲಿ ನಡೆದ ಅಸಹಕಾರ ಚಳವಳಿಯ ಮಹತ್ವ ಏನು?
ಸರ್ಕಾರದಂದ ಅಗತ್ಯ ವಸ್ತುಗಳನ್ನು ಒದಗಿಸದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬುದು ಗ್ರಾಮಸ್ಥರ ಅಳಲಾಗಿದೆ. ಹಿಮಾಲಯ ಪ್ರದೇಶಗಳಲ್ಲಿರುವ ಈ ಗ್ರಾಮಗಳ ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಕಳುಹಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಸ್ಥಳೀಯ ಶಾಸಕರಾದ ಹರೀಶ್ ಧಾಮಿ ತಿಳಿಸಿದ್ದಾರೆ.
ಇಲ್ಲಿನವರ ಕಸುಬೇನು?
ಈ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು 6 ತಿಂಗಳುಗಳ ಕಾಲ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಕೃಷಿ ಮತ್ತು ಪಶುಸಂಗೋಪನೆಗೆ ಹೋಗುತ್ತಾರೆ. ಚಳಿಗಾಲದಲ್ಲಿ ಅವರು ಹಿಮಪಾತದಿಂದ ತಪ್ಪಿಸಲು ತಗ್ಗು ಪ್ರದೇಶಗಳಿಗೆ ಬರುತ್ತಾರೆ. ಆದರೆ, ಈ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಹಾನಿಗೊಳಗಾಗಿದ್ದು, ಅಗತ್ಯ ಸರಕುಗಳನ್ನು ಪೂರೈಸಲು ಹೆಚ್ಚಿನ ಸಾರಿಗೆ ವೆಚ್ಚವನ್ನು ಭರಿಸಬೇಕಿದ್ದು, ವಸ್ತುಗಳನ್ನು ದುಪ್ಪಟ್ಟು ಹಣ ಕೊಟ್ಟು ಜನರು ಕೊಳ್ಳಬೇಕಿದೆ.