ಇಂದೋರ್(ಮಧ್ಯ ಪ್ರದೇಶ) : ಪರೀಕ್ಷೆಯಲ್ಲಿ ನಕಲು ಮಾಡಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ, ಅವುಗಳನ್ನೂ ಮೀರಿದ ಬುದ್ಧಿವಂತಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸುತ್ತಾರೆ. ಇಂಥ ಖತರ್ನಾಕ್ ಗ್ಯಾಂಗ್ ಒಂದನ್ನು ಫ್ಲೈಯಿಂಗ್ ಸ್ಕ್ವಾಡ್ ಭೇದಿಸಿದ್ದು, ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ (ಡಿಎವಿವಿ) ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬ್ಲೂಟೂತ್ ಬಳಸಿ ನಕಲು ಮಾಡುತ್ತಿರುವುದನ್ನ ಡೆಪ್ಯುಟಿ ರಿಜಿಸ್ಟ್ರಾರ್ ರಚನಾ ಠಾಕೂರ್ ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ಪತ್ತೆಹಚ್ಚಿದ್ದಾರೆ.
ಒಬ್ಬ ವಿದ್ಯಾರ್ಥಿ ಉಡುಪಿನ ಒಳಭಾಗದಲ್ಲಿ ಸಣ್ಣ ಬ್ಲೂಟೂತ್ ಸಾಧನವನ್ನು ಹೊಲಿದುಕೊಂಡಿದ್ದು, ಅದಕ್ಕೆ ಅವನ ಕಾಲರ್‌ಗೆ ಹೊಂದುವ ರೀತಿ ತೆಳುವಾದ ತಂತಿಯೊಂದಿಗೆ ಸಂಪರ್ಕ ಕಲ್ಪಿಸಿದ್ದ. ಈ ಸಾಧನವು ಗೋಚರಿಸದೇ ಕೇವಲ ಬ್ಲೂಟೂತ್ ಸಾಧನಕ್ಕೆ ಸಂಪರ್ಕಗೊಳ್ಳುವಂತೆ ರಚನೆ ಮಾಡಿದ್ದ ಎಂದು ಠಾಕೂರ್ ತಿಳಿಸಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿಯ ಜೇಬಿನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಕೆಲವು ಬ್ಲೂಟೂತ್ ಸಾಧನಕ್ಕೆ ಸಂಪರ್ಕಗೊಂಡಿರುವ ಮೊಬೈಲ್ ಫೋನ್‌ನಲ್ಲಿ ಕರೆ ಚಾಲನೆಯಲ್ಲಿತ್ತು ಎಂದು ಅವರು ತಿಳಿಸಿದ್ದಾರೆ.
"ಇಬ್ಬರೂ ವಿದ್ಯಾರ್ಥಿಗಳ ಕಿವಿಗೆ ಮೈಕ್ರೋ ಸೈಜ್ ಬ್ಲೂಟೂತ್ ಸಾಧನಗಳನ್ನು ಅಳವಡಿಸಿಕೊಂಡಿದ್ದರೂ ಅದು ನಮಗೆ ತಕ್ಷಣ ಗೋಚರಿಸಲಿಲ್ಲ. ನಾವು ಸಾಧನ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ" ಎಂದು ಅವರು ಮಾಹಿತಿ ನೀಡಿದರು.