ಇಂದೋರ್(ಮಧ್ಯಪ್ರದೇಶ): ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯವಾಗಿ, ವರ್ಷಗಳ ಕಾಲ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಜೋಡಿ, ಕಳೆದ ಏಳು ದಿನಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಇದರ ಬೆನ್ನಲ್ಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ವಿವಾಹಿತ ಯುವತಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಏನಿದು ಸಂಪೂರ್ಣ ಪ್ರಕರಣ?: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ವಾಸವಾಗಿದ್ದ ಯುವತಿ ಜೊತೆ ಇನ್ಸ್ಟಾ ಮೂಲಕ ಯುವಕನೊಬ್ಬ ಪರಿಚಯವಾಗಿದ್ದನು. ಇದಾದ ಬಳಿಕ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದು, ಇಂದೋರ್ನಲ್ಲಿ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ. ಈ ವೇಳೆ ಯುವತಿ ಗರ್ಭಿಣಿಯಾಗಿದ್ದಾಳೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಯುವಕ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾನೆ. ಇದರ ಮಧ್ಯೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಈ ವೇಳೆ, ಎರಡು ಕುಟುಂಬದ ಸದಸ್ಯರನ್ನ ಠಾಣೆಗೆ ಕರೆಯಿಸಿರುವ ಪೊಲೀಸರು ರಾಜಿ - ಸಂಧಾನ ಮಾಡಿಸಿದ್ದಾರೆ. ಹೀಗಾಗಿ, ಇವರಿಬ್ಬರೂ ಮತ್ತೆ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ. ಈ ವೇಳೆ, ಯುವತಿಗೆ ಗರ್ಭಪಾತ ಮಾಡಿಸಿ, ಕಳೆದ ವಾರ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರು ಮುಂದೆ ನಿಂತು ವಿವಾಹ ಮಾಡಿಸಿದ್ದಾರೆ.
ಇದನ್ನೂ ಓದಿ: 58 ವರ್ಷದಿಂದ ಪಿಂಚಣಿ ಪಡೆಯುತ್ತಿದ್ದಾರೆ ಈ 95ರ ಹಿರಿಯಜ್ಜ : ಈಗಲೂ ಯಾವ ಕೆಲಸಕ್ಕೂ ಹಿಂಜರಿಯೋದಿಲ್ಲ!
ಮದುವೆ ಬಳಿಕ ಎರಡು ಕುಟುಂಬ ಇವರನ್ನ ಮನೆಯಿಂದ ಹೊರಹಾಕಿದ್ದಾರೆ. ಜೊತೆಗೆ ಯಾವುದೇ ರೀತಿಯ ಆಸ್ತಿ ನೀಡಿಲ್ಲ. ಯುವಕ ಕೇವಲ 12ನೇ ತರಗತಿ ಓದಿರುವ ಕಾರಣ ಯಾವುದೇ ಕೆಲಸ ಸಿಕ್ಕಿಲ್ಲ. ಯುವತಿ ಡಿಗ್ರಿ ಮುಗಿಸಿದ್ದರಿಂದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಬಾಡಿಗೆ ಮನೆಯಲ್ಲಿ ವಾಸವಾಗಿ, ಎಲ್ಲ ಖರ್ಚ ಖುದ್ದಾಗಿ ನೋಡಿಕೊಳ್ಳುತ್ತಿದ್ದಳು. ಕುಟುಂಬಸ್ಥರು ಇವರನ್ನ ಹೊರಹಾಕಿದ್ದು, ಹಾಗೂ ಕೆಲಸ ಸಿಗದ ಕಾರಣ ಖಿನ್ನತೆಗೊಳಗಾಗಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಯುವತಿ ಹೇಳಿದ್ದಾಳೆ.
ಯುವತಿ ವಿರುದ್ಧ ಯುವಕನ ಕುಟುಂಬದ ಆರೋಪ: ಮೃತ ಯುವಕನ ಕುಟುಂಬಸ್ಥರು ಯುವತಿ ಮೇಲೆ ಗಂಭೀರ ಆರೋಪ ಮಾಡಿದ್ದು, ನಮ್ಮ ಮಗನಿಗೆ ಕಿರುಕುಳ ನೀಡಿದ್ದರಿಂದ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಆತನನ್ನ ಕೋಣೆಯೊಳಗೆ ಕೂಡಿ ಹಾಕಿ, ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಇದರಿಂದ ಮನನೊಂದು ಆತ ನೇಣು ಬಿಗಿದುಕೊಂಡಿದ್ದಾನೆಂದು ಆರೋಪ ಮಾಡಿದ್ದಾರೆ. ಮೃತ ಯುವಕನ ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.