ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ತಮ್ಮ ನೆಚ್ಚಿನ ಶ್ವಾನ 'ಮಲಿಬೂ' ಬಿಟ್ಟು ಭಾರತಕ್ಕೆ ವಾಪಸ್ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಇಂಜಿನಿಯರ್ ವಿದ್ಯಾರ್ಥಿಯನ್ನು ಮನವೊಲಿಸಿ ಕೊನೆಗೂ ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ.
ತನ್ನ ಶ್ವಾನವನ್ನು ಅಲ್ಲೇ ಬಿಟ್ಟು ಡೆಹ್ರಾಡೂನ್ ಮೂಲದ ರಿಷಬ್ ಕೌಶಿಕ್ ಇತರೆ ವಿದ್ಯಾರ್ಥಿಗಳೊಂದಿಗೆ ದೆಹಲಿಗೆ ಬಂದಿಳಿದಿದ್ದಾರೆ. ಹಂಗೇರಿಯಾದ ಬುದಾಪೆಸ್ಟ್‌ನಿಂದ ಹೊರಟಿದ್ದ ವಿಮಾನ ರಾಷ್ಟ್ರ ರಾಜಧಾನಿಗೆ ಆಗಮಿಸಿದೆ.
ಖಾರ್ವಿಯ ನ್ಯಾಷನಲ್ ಯುನಿವರ್ಸಿಟಿ ಆಫ್ ರೇಡಿಯೋ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿವಿಯಲ್ಲಿ ಕೌಶಿಕ್ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದರು.
ತಾಯ್ನಾಡಿಗೆ ಮರಳುವುದಕ್ಕೂ ಮುನ್ನ ವಿದ್ಯಾರ್ಥಿ, ಮಲಿಬೂವನ್ನು ಭಾರತಕ್ಕೆ ಕರೆತರಲು ಎದುರಿಸಿದ ಸಂಕಷ್ಟಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೆ, ಶ್ವಾನವನ್ನು ತಮ್ಮೊಂದಿಗೆ ಕರೆತರಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದರು. 'ಪ್ರಾಣಿಗಳ ನೈತಿಕ ಚಿಕಿತ್ಸೆಗಾಗಿ ಜನರ' ಸಂಘಟನೆ ಪೇಟಾ ಕೂಡ ಕೌಶಿಕ್ ಅವರ ಶ್ವಾನವನ್ನು ವಿಮಾನದಲ್ಲಿ ಕರೆತರುವಂತೆ ಒತ್ತಾಯಿಸಿತ್ತು.
ಶ್ವಾನ, ಬೆಕ್ಕನ್ನು ವಿದ್ಯಾರ್ಥಿಗಳು ತಮ್ಮೊಂದಿಗೆ ಕರೆತರಲು ಹೆಚ್ಚು ದಾಖಲಾತಿಗಳನ್ನು ಸಲ್ಲಿಸುವ ದೊಡ್ಡ ಪ್ರಕ್ರಿಯೆಯೇ ಇದೆ. ಹೀಗಾಗಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡುವುದಕ್ಕೆ ಮೊದಲ ಆದ್ಯತೆ ಎಂದು ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ 130 ಬಸ್ ಸೇವೆ ಕಲ್ಪಿಸಿದ ರಷ್ಯಾ