ನವದೆಹಲಿ: ಪಾಕಿಸ್ತಾನದ ಗಡಿಯೊಳಗೆ ಭಾರತದ ಕ್ಷಿಪಣಿ ಬಿದ್ದಿರುವುದು ಆಕಸ್ಮಿಕವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ನಿಖರವಾದ ಕಾರಣ ತಿಳಿಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು.
ಪಾಕಿಸ್ತಾನಕ್ಕೆ ಭಾರತದ ಕ್ಷಿಪಣಿ ಹಾರಿರುವ ಸಂಬಂಧ ರಾಜ್ಯಸಭೆಯಲ್ಲಿ ವಿವರಣೆ ನೀಡಿರುವ ಅವರು, ಮಾರ್ಚ್ 9ರಂದು ರಾತ್ರಿ 7 ಗಂಟೆ ಸುಮಾರಿಗೆ ಭಾರತದ ಕ್ಷಿಪಣಿ ನಿರ್ವಹಣೆ ಮತ್ತು ತಪಾಸಣೆ ವೇಳೆ ಆಕಸ್ಮಿಕವಾಗಿ ಬಿಡುಗಡೆಯಾಗಿ, ಪಾಕಿಸ್ತಾನಕ್ಕೆ ಬಂದಿದೆ ಎಂದು ತಿಳಿಸಿದರು. ಭಾರತ ಕ್ಷಿಪಣಿಯು ಪಾಕಿಸ್ತಾನದಲ್ಲಿ ಬಂದಿರುವ ಕುರಿತು ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ. ಈ ತನಿಖೆ ಪೂರ್ಣಗೊಂಡ ನಂತರವಷ್ಟೇ ಕ್ಷಿಪಣಿ ಆಕಸ್ಮಿಕವಾಗಿ ಹಾರಿರುವುದರ ಹಿಂದಿನ ನಿಖರ ಕಾರಣವೂ ತಿಳಿಯಲಿದೆ ಎಂದರು.
ದೇಶದ ಕ್ಷಿಪಣಿ ವ್ಯವಸ್ಥೆಯು ಭದ್ರತೆ ಮತ್ತು ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ ರಾಜನಾಥ್ ಸಿಂಗ್, ದೇಶದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಾಕಿಸ್ತಾನಕ್ಕೆ ಕ್ಷಿಪಣಿ ಹಾರಿರುವ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿರುವುದು ಸಮಾಧಾನದ ಸಂಗತಿ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸೌಲಭ್ಯ: ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?