ನವದೆಹಲಿ: ಭಾರತೀಯ ಸೇನೆ ಗಣನೀಯ ಭದ್ರತಾ ಸವಾಲು ಎದುರಿಸುತ್ತಿದ್ದು, ಅವುಗಳನ್ನ ಸುಲಭವಾಗಿ ಎದುರಿಸಲು ಇದೀಗ 4ನೇ ಶತಮಾನದ ಮಿಲಿಟರಿ ತಜ್ಞ, ಚಿಂತಕ ಚಾಣಕ್ಯ ಮತ್ತು ತಿರುವಳ್ಳುವರ್ ಅವರ ಸಿದ್ಧಾಂತ ಅನ್ವಯಿಸಿಕೊಳ್ಳುತ್ತಿದೆ. ದಾರ್ಶನಿಕರಾದ ಚಾಣಕ್ಯ ಮತ್ತು ತಿರುವಳ್ಳುವರ್ ಅವರ ಅನೇಕ ಸಿದ್ಧಾಂತಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಉಪಯುಕ್ತ ಎಂಬುದನ್ನ ಭಾರತೀಯ ಸೇನೆ ಗಮನಿಸಿದ್ದು, ಅವುಗಳನ್ನ ಅನ್ವಯಿಸಿಕೊಳ್ಳಲು ಮುಂದಾಗಿದೆ.
ಭಾರತೀಯ ಭದ್ರತಾ ಸವಾಲುಗಳ ಕುರಿತು ಆನ್ಲೈನ್ ಸೆಮಿನಾರ್ ಮೂಲಕ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ನರವಣೆ ಮಾತನಾಡಿದರು. ಸೆಂಟರ್ ಫಾರ್ ಲ್ಯಾಂಡ್ ವಾರ್ಫೇರ್ ಸ್ಟಡೀಸ್(CLAWS) ಆಯೋಜನೆ ಮಾಡಿದ್ದ ಭವಿಷ್ಯದ ಯುದ್ಧಗಳು ಮತ್ತು ಪ್ರತಿತಂತ್ರಗಳ ಬಾಹ್ಯರೇಖೆಗಳು ಎಂಬ ವಿಷಯದ ಮೇಲೆ ನರವಣೆ ಮಾತನಾಡಿದರು.
ಪ್ರಾಚೀನ ಕಾಲದ ಅನೇಕ ಸಿದ್ಧಾಂತಗಳು ಪ್ರಸಕ್ತ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗಿದ್ದು, ಅದೇ ಕಾರಣಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಚಾಣಕ್ಯ ಅವರ ಅರ್ಥಶಾಸ್ತ್ರ ಮತ್ತು ತಿರುವಳ್ಳುವರ್ ಅವರ ತಿರುಕ್ಕುರಲ್ ಕೃತಿಗಳಲ್ಲಿ ಉಲ್ಲೇಖವಾಗಿರುವ ಅನೇಕ ಸಿದ್ಧಾಂತಗಳ ಅಧ್ಯಯನ ಮಾಡಲು ಭಾರತೀಯ ಸೇನೆ ಆರಂಭಿಸಿದೆ. ಸಂಸ್ಕೃತ ಮತ್ತು ತಮಿಳು ಭಾಷೆಯಲ್ಲಿ ಚಾಣಕ್ಯ ಬರೆದ ಅರ್ಥಶಾಸ್ತ್ರ ಕೃತಿ ಲಭ್ಯವಿದ್ದು, 1ನೇ ಶತಮಾನದಲ್ಲಿ ತಿರುವಳ್ಳುವರ್ ಬರೆದಿರುವ ತಿರುಕ್ಕುರಲ್ನಲ್ಲಿ ಯುದ್ಧನೌಕೆ, ರಾಜತಾಂತ್ರಿಕತೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ.
ಭವಿಷ್ಯದ ಬಗ್ಗೆ ಹೆಚ್ಚು ಉತ್ಸಾಹಿತರಾಗಿರುವ ನಾವು, ಕೆಲವೊಮ್ಮೆ ಭೂತಕಾಲದಲ್ಲಿ ನಡೆದು ಹೋಗಿರುವ ಪಾಠಗಳ ಬಗ್ಗೆ ಮರೆತು ಬಿಡುತ್ತೇವೆ. ಅಂದಿನ ನೀತಿ-ಸಿದ್ಧಾಂತಗಳು ಈಗಲೂ ಪ್ರಸ್ತುತವಾಗಿದ್ದು, ಭವಿಷ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದಿದ್ದಾರೆ.
ದೇಶದ ಗಡಿಯಲ್ಲಿ ನಾವು ಅನೇಕ ಭದ್ರತಾ ಸಮಸ್ಯೆ ಎದುರಿಸುತ್ತಿದ್ದು, ಭಾರತ ಭವಿಷ್ಯದ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಗಡಿ ವಿವಾದ, ಪರಮಾಣು ಸಮಸ್ಯೆ ನಮ್ಮ ಮುಂದಿರುವ ಅತಿದೊಡ್ಡ ಸಮಸ್ಯೆಗಳಾಗಿವೆ. ಪಾಕ್ ಮತ್ತು ಚೀನಾದಿಂದ ಎದರುಗಾಗಬಹುದಾದ ಭದ್ರತಾ ಸಮಸ್ಯೆ ಮೇಲೆ ಬೆಳಕು ಚೆಲ್ಲಿರುವ ನರವಣೆ, ಇತ್ತೀಚಿನ ದಿನಗಳಲ್ಲಿ ಭದ್ರತೆ ಸವಾಲಿನ ಕೆಲಸವಾಗಿದ್ದು, ಅವುಗಳನ್ನ ಎದುರಿಸಲು ನಾವು ಶಕ್ತವಾಗಿದ್ದೇವೆ ಎಂದು ತಿಳಿಸಿದರು.