ಕುಪ್ವಾರ (ಜಮ್ಮು ಮತ್ತು ಕಾಶ್ಮೀರ): ಉತ್ತರ ಕಾಶ್ಮೀರದ ಗಡಿರೇಖೆಯ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಭಾನುವಾರ ಒಳನುಸುಳುತ್ತಿದ್ದ ಮತ್ತೊಬ್ಬ ಉಗ್ರನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಪ್ವಾರದ ಜುಮಗುಂಡ್ ಸೆಕ್ಟರ್ನ ಗಡಿ ರೇಖೆಯಲ್ಲಿ ಭಾರತದ ಕಡೆ ನುಸುಳಲು ಯತ್ನಿಸುತ್ತಿದ್ದ ಅಪರಿಚಿತ ಉಗ್ರನನ್ನು ಸೇನೆ ಹೊಡೆದುರುಳಿಸಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಗಡಿ ನಿಯಂತ್ರಣ ರೇಖೆಯ ಮಚಿಲ್ ಸೆಕ್ಟರ್ನಲ್ಲಿ ಐವರು ಉಗ್ರರನ್ನು ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸದೆಬಡಿದಿದ್ದರು.
ಭಾರತೀಯ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮೇಜರ್ ಜನರಲ್ ರಾಜೇಶ್ ಕಾಲಿಯಾ, ನಮ್ಮ ಪಡೆಗಳ ನಿರಂತರ ಬದ್ಧತೆ ಹಾಗೂ ನಿರ್ಣಯ ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಗಮನಾರ್ಹ ಯಶಸ್ಸಿಗೆ ಕಾರಣವಾಗಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ ಕುಪ್ವಾರ ಜಿಲ್ಲೆಯೊಂದರಲ್ಲೇ 27 ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ಭದ್ರತಾ ಪಡೆಗಳು ಕಾರ್ಯಾಚರಣೆ ಬಗ್ಗೆ ಬದ್ಧವಾಗಿದ್ದಾರೆ. ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಆಯಕಟ್ಟಿನ ಸ್ಥಳಗಳಲ್ಲಿ ಸೈನಿಕರು ಬೀಡು ಬಿಟ್ಟಿದ್ದು, ಶತ್ರುಗಳ ಪ್ರತಿಯೊಂದು ನಡೆಯನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ಹಾಗೂ ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಕುಸಿತ ಕಂಡಿದ್ದ ಉಗ್ರರ ಒಳನುಸುಳುವಿಕೆ, ಈ ವರ್ಷ ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಳನುಸುಳುವಿಕೆಯ ಪ್ರಯತ್ನಗಳ ಕ್ರಮೇಣ ಹೆಚ್ಚಾಗುತ್ತಿದೆ. 2023ರಲ್ಲಿ ಭಾರತದ ಒಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ 41 ಉಗ್ರರನ್ನು ಹೊಡೆದುರುಳಿಸಲಾಗಿದೆ.
ಮಚ್ಚಲ್ ಸೆಕ್ಟರ್ನಲ್ಲಿ ಕಳೆದ ಇತ್ತೀಚೆಗಷ್ಟೇ 5 ಉಗ್ರರನ್ನು ಹೊಡೆದುರುಳಿಸಿದ್ದ ಸೇನೆ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಂದ ಐವರು ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿತ್ತು. ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್ನಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇನಾ ಗುಂಡಿಗೆ ಬಲಿಯಾಗಿದ್ದರು. ಬೆಳಗ್ಗೆ ಇಬ್ಬರನ್ನು ಹತ್ಯೆ ಮಾಡಿದ್ದ ಸೇನೆ ಬಳಿಕ ಕಾರ್ಯಾಚರಣೆ ಮುಂದುವರಿಸಿ ಮತ್ತೆ ಮೂವರನ್ನು ಬಲಿ ತೆಗೆದುಕೊಂಡಿತ್ತು.
ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಮೊನ್ನೆ ಮೊನ್ನೆಯಷ್ಟೇ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಜಮ್ಮುವಿನ ಅರ್ನಿಯಾ ಮತ್ತು ಆರ್ಎಸ್ ಪುರ ಸೆಕ್ಟರ್ಗಳ ಅಂತಾರಾಷ್ಟ್ರೀಯ ಗಡಿ (ಐಬಿ) ಯಲ್ಲಿರುವ ಐದು ಬಿಎಸ್ಎಫ್ ಪೋಸ್ಟ್ಗಳ ಮೇಲೆ ಪಾಕಿಸ್ತಾನದ ರೇಂಜರ್ಗಳು ಕಳೆದ ಗುರುವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಗಡಿ ಭದ್ರತಾ ಪಡೆಯ ಯೋಧ ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದರು.
ಇದನ್ನೂ ಓದಿ : ಶ್ರೀನಗರದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ