ಹೈದರಾಬಾದ್: ಮೂರು ವಾರಗಳ ರಜೆ ಮುಗಿಸಿ ಸೇನೆಗೆ ವಾಪಸ್ ಆಗಲು ಮನೆಯಿಂದ ಹೊರಟಿದ್ದ ತೆಲಂಗಾಣ ಮೂಲದ ಯೋಧ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ಸಿದ್ದಿಪೇಟ್ ಜಿಲ್ಲೆಯ ಪೋತಿರೆಡ್ಡಿಪಲ್ಲಿ ಸಾಯಿ ಕಿರಣ್ ರೆಡ್ಡಿ ನಾಪತ್ತೆಯಾಗಿರುವ ಯೋಧ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಯಿ ಕಿರಣ್ ರೆಡ್ಡಿ ನವೆಂಬರ್ 16 ರಿಂದ ಮೂರು ವಾರಗಳ ರಜೆ ಮುಗಿಸಿ ನಂತರ ಕುಟುಂಬದರಿಗೆ ಪಂಜಾಬ್ ಗಡಿಯಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಾರೆ. ಆದರೆ ಡಿಸೆಂಬರ್ 5 ರಂದು ಪಂಜಾಬ್‌ಗೆ ತೆರಳಿದ್ದರೂ, ಕರ್ತವ್ಯದ ಸ್ಥಳಕ್ಕೆ ತಲುಪಲಿಲ್ಲ. ಇದನ್ನು ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವಾಗ ಕೊನೆಯದಾಗಿ ವಾಟ್ಸ್ಆ್ಯಪ್ ಕರೆ ಮೂಲಕ ತಮ್ಮೊಂದಿಗೆ ಮಾತನಾಡಿಸಿದ್ದರು ಎಂದು ರೆಡ್ಡಿ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಇದಾದ ಬಳಿಕ 4 ದಿನಗಳ ಕಾಲ ಆತನ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಆತ ಎಲ್ಲಿದ್ದಾನೆ ಎಂಬ ಆತಂಕ ಶುರುವಾಗಿದೆ.
ಇದರಿಂದ ಕಂಗಾಲಾದ ಪೋಷಕರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಚೆರಿಯಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯ ಬಗ್ಗೆ ದೆಹಲಿ ವಿಮಾನ ನಿಲ್ದಾಣದ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶೂನ್ಯ ಎಫ್‌ಐಆರ್ ದಾಖಲಾಗಿದ್ದು, ಸೇನಾ ಯೋಧನ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐ ನರೇಂದ್ರ ರೆಡ್ಡಿ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ನಾಪತ್ತೆ..?
ಫರೀದ್‌ಕೋಟ್ ವಿಮಾನ ಹತ್ತುವ ಉದ್ದೇಶದಿಂದ ಯೋಧ ದೆಹಲಿಗೆ ಬಂದಿಳಿದಿರುವುದು ದೆಹಲಿ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಿಂದ ದೃಢಪಟ್ಟಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ದೆಹಲಿ ಸೇನಾ ಪೊಲೀಸರಿಗೆ ವರ್ಗಾಯಿಸಲಾಗಿದೆ. ನಾಪತ್ತೆಯಾಗಿರುವ ಯೋಧನ ಪತ್ತೆಗಾಗಿ ಇತ್ತ ಸಿದ್ದಿಪೇಟೆ ಪೊಲೀಸರು 3 ತಂಡಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ಎರಡೂವರೆ ವರ್ಷಗಳಿಂದ ಹೇಳ್ತಾನೆ ಇದ್ದೇನೆ, ರೋಹಿತ್ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಕೊಹ್ಲಿ