ಕೋಲ್ಕತಾ : ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಟಿ-20 ಪಂದ್ಯಗಳನ್ನು ಆಡಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ನ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಅಹಮದಾಬಾದ್ನಲ್ಲಿ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ನಾಲ್ಕು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳು ಹಾಗೂ ಐದು ಟಿ-ಟ್ವೆಂಟಿ ಪಂದ್ಯಗಳನ್ನು ಟೀಂ ಇಂಡಿಯಾ, ಇಂಗ್ಲೆಂಡ್ನೊಂದಿಗೆ ಆಡುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ತುಂಬಾ ಮಂದಿ ಕೋವಿಡ್ ಎರಡನೇ ಅಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ವಾತಾವರಣ ನೋಡಿಕೊಂಡು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಮುನ್ನೆಚ್ಚರಿಕೆ ವಹಿಸುತ್ತೇವೆ. ಎರಡು ತಂಡಗಳು ಮಾತ್ರ ಆಡುವ ಕಾರಣದಿಂದ ಕಠಿಣವೇನೂ ಆಗುವುದಿಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ರಣಜಿಗೂ ಮೊದಲೇ ಮುಷ್ತಾಕ್ ಅಲಿ ಟೂರ್ನಿಗೆ ಬಿಸಿಸಿಐ ಚಿಂತನೆ
ಈಗಾಗಲೇ ಭಾರತ-ಆಸ್ಟ್ರೇಲಿಯಾ ಪಂದ್ಯಗಳು ನವೆಂಬರ್ 27ರಂದು ನಡೆಯಲಿದ್ದು, ಇದಾದ ನಂತರ ಇಂಗ್ಲೆಂಡ್ ವಿರುದ್ದ ಭಾರತ ತಂಡ ಆಡಲಿದೆ. ಆದರೆ, ಇನ್ನೂ ದಿನಾಂಕ ನಿರ್ಧಾರವಾಗಿಲ್ಲ. ಆದರೂ ಪಂದ್ಯಗಳು ನಡೆಯುವುದು ಖಚಿತವಾಗಿದ್ದು, ಪಂದ್ಯಗಳ ಬಗ್ಗೆ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಏಕದಿನ, ಮೂರು ಟಿ-20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಏಕದಿನ ಪಂದ್ಯ ಶುಕ್ರವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯಲಿದೆ.
ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ಟೆಸ್ಟ್ ಆಡಲಿದ್ದು, ನಂತರ ಬಿಸಿಸಿಐನಿಂದ ಅನುಮತಿ ಪಡೆದು ಮನೆಗೆ ಮರಳಲಿದ್ದಾರೆ. ಆಸ್ಟ್ರೇಲಿಯಾದೊಂದಿಗೆ ಸರಣಿ ಪೂರ್ಣಗೊಂಡ ನಂತರ ಇಂಗ್ಲೆಂಡ್ ವಿರುದ್ಧ ಆಡಲಿರುವ ಪಂದ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಕೂಡ ನೆರವಾಗಲಿವೆ ಎಂದು ಅಂದಾಜಿಸಲಾಗಿದೆ.