ಹೈದರಾಬಾದ್: ದೇಶಾದ್ಯಂತ ನಡೆದ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದ್ದರೆ, ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಗೆದ್ದಿದೆ. ಈ ಮೂಲಕ ಇಂಡಿಯಾ ಮೈತ್ರಿಕೂಟ ಹೋರಾಟದ ಹುರುಪು ಹೆಚ್ಚಿಸಿಕೊಂಡಿದೆ.
ತ್ರಿಪುರಾದಲ್ಲಿ ಬಿಜೆಪಿಗೆ ಆರಂಭಿಕ ಗೆಲುವು : ತ್ರಿಪುರಾದಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿಗಳಾದ ತಫಜ್ಜಲ್ ಹೊಸೈನ್ ಮತ್ತು ಬಿಂದು ದೇಬನಾಥ್ ಅವರು ಕ್ರಮವಾಗಿ ಬೊಕ್ಸಾನಗರ್ ಮತ್ತು ಧನ್‌ಪುರ್ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
ಕೇರಳದ ಪುತ್ತುಪಲ್ಲಿ ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್ : ಕೇರಳದಲ್ಲಿ, ಕಾಂಗ್ರೆಸ್‌ನ ಚಾಂಡಿ ಉಮ್ಮನ್, ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಐದು ದಶಕಗಳಿಂದ ಗೆಲುವು ಸಾಧಿಸುತ್ತಾ ಬಂದಿದ್ದ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 37 ವರ್ಷದ ಕಾಂಗ್ರೆಸ್ ನಾಯಕ ಚಾಂಡಿ ಉಮ್ಮನ್, ಆಡಳಿತಾರೂಢ ಸಿಪಿಐ(ಎಂ) ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರನ್ನು 36,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು.
ಉತ್ತರಾಖಂಡದ ಬಾಗೇಶ್ವರ ಕ್ಷೇತ್ರ ಉಳಿಸಿಕೊಂಡ ಬಿಜೆಪಿ: ಬಿಜೆಪಿ ಅಭ್ಯರ್ಥಿ ಪಾರ್ವತಿ ದಾಸ್, ಕಾಂಗ್ರೆಸ್‌ನ ಬಸಂತ್ ಕುಮಾರ್ ಅವರನ್ನು 2,400 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಜಯಭೇರಿ ಬಾರಿಸಿದರು. ಈ ಮೂಲಕ ಉತ್ತರಾಖಂಡದ ಬಾಗೇಶ್ವರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಾರ್ಖಂಡ್‌ನ ಡುಮ್ರಿಯಲ್ಲಿ ಜೆಎಂಎಂ ಗೆಲುವು: ಜಾರ್ಖಂಡ್‌ನಲ್ಲಿ ಜೆಎಂಎಂನ ಬೇಬಿ ದೇವಿ ಅವರು ಡುಮ್ರಿ ಉಪಚುನಾವಣೆಯಲ್ಲಿ 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ, ಅವರ ಸಮೀಪದ ಪ್ರತಿಸ್ಪರ್ಧಿ AJSU ನ ಯಶೋದಾ ದೇವಿ ಅವರನ್ನು ಸೋಲಿಸಿದ್ದಾರೆ.
ಪಶ್ಚಿಮ ಬಂಗಾಳದ ಧುಪ್ಗುರಿ ಕ್ಷೇತ್ರದಲ್ಲಿ ಟಿಎಂಸಿ ಗೆಲುವು: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಧುಪ್ಗುರಿ ಕ್ಷೇತ್ರವನ್ನು ಬಿಜೆಪಿಯಿಂದ ವಶಪಡಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್ ಸಿಪಿಎಂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿತ್ತು.
ಉತ್ತರ ಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಗೆಲುವು: ಉತ್ತರ ಪ್ರದೇಶದ ಘೋಸಿಯ ನಿರ್ಣಾಯಕ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ 42,000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಅನ್ನು ಸೋಲಿಸುವ ಮೂಲಕ ವಿಜಯಶಾಲಿಯಾಗಿದ್ದಾರೆ.
ಒಟ್ಟಾರೆ ಉಪ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಒಟ್ಟು ಏಳು ಸ್ಥಾನಗಳಲ್ಲಿ ಅದು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉತ್ತರಪ್ರದೇಶದಲ್ಲಿ ಆಡಳಿತದಲ್ಲಿದ್ದರೂ ಉಪ ಚುನಾವಣೆ ಸೋತಿದೆ. ತ್ರಿಪುರದಲ್ಲಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಕಡೆ ಇಂಡಿಯಾ ಮೈತ್ರಿಕೂಟ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ತುಸು ಮುನ್ನಡೆ ಪಡೆದುಕೊಂಡಿದೆ. ಇದು ಇಂಡಿಯಾಗೆ ಹುಮ್ಮಸ್ಸು ತಂದುಕೊಟ್ಟಂತಿದೆ. ಉಪ ಚುನಾವಣೆಯೇ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮಾರ್ಗಸೂಚಿಯಲ್ಲ. ಆದರೆ ಪ್ರತಿಪಕ್ಷಗಳಿಗೆ ಹೋರಾಟದ ಕಿಚ್ಚು ಹೊತ್ತಿಸುವುದು ಸುಳ್ಳಲ್ಲ.
ಇದನ್ನು ಓದಿ: ಉಪಚುನಾವಣೆ: ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ಗೆ ಭರ್ಜರಿ ಗೆಲುವು