ನವದೆಹಲಿ: ಇಂದಿನಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗಾಗಿ ಕೋವಿಡ್ ವ್ಯಾಕ್ಸಿನೇಷನ್ಗೆ ಚಾಲನೆ ಸಿಗಲಿದ್ದು, ಇಂದು ರಷ್ಯಾದ 'ಸ್ಪುಟ್ನಿಕ್ ವಿ' ಲಸಿಕೆ ಡೋಸ್ಗಳ ಮೊದಲ ಬ್ಯಾಚ್ ಭಾರತಕ್ಕೆ ಬರುತ್ತಿದೆ.
ಇಂದು ಎರಡು ಲಕ್ಷ ಡೋಸ್ಗಳನ್ನು ಭಾರತ ಸ್ವೀಕರಿಸಲಿದ್ದು, ಜೂನ್ ವೇಳೆಗೆ ದೇಶವು 50 ಲಕ್ಷ ಡೋಸ್ ಪಡೆಯುವ ನಿರೀಕ್ಷೆಯಿದೆ. ಈವರೆಗೆ ದೇಶೀಯ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅನ್ನು ನೀಡಲಾಗುತ್ತಿತ್ತು. ಇದೀಗ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಮೂರನೇ ಲಸಿಕೆ ನೀಡಲು ಭಾರತ ಸಜ್ಜಾಗಿದೆ.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟು: 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಿರುವ ಕೇಂದ್ರ ಸರ್ಕಾರ
ಸ್ಪುಟ್ನಿಕ್ ವಿ, ಇದು ರಷ್ಯಾದ ಮಾಸ್ಕೋದಲ್ಲಿನ ಗಮಾಲಿಯಾ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ & ಮೈಕ್ರೋಬಯೋಲಜಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆಯಾಗಿದೆ. ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಮೂರನೇ ಕೋವಿಡ್ ಲಸಿಕೆ ಇದಾಗಿದ್ದು, ಇದು ಶೇ. 91 ರಷ್ಟು ಪರಿಣಾಮಕಾರಿಯಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದರಲ್ಲಿ ಹೇಳಲಾಗಿದೆ.
ಪ್ರತಿ ನಾಗರಿಕರು ಲಸಿಕೆಯ ಎರಡು ಡೋಸ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಡೋಸ್ ಪಡೆದ 21 ದಿನಗಳ ಬಳಿಕ ಎರಡನೇ ಡೋಸ್ ತೆಗೆದುಕೊಳ್ಳಬೇಕಿದೆ. ಕೋವಾಕ್ಸಿನ್ನ ಎರಡನೇ ಡೋಸ್ ಪಡೆಯಲು 28 ರಿಂದ 42 ದಿನಗಳ ಅಂತರ ಹಾಗೂ ಕೋವಿಶೀಲ್ಡ್ನ 2ನೇ ಡೋಸ್ ಪಡೆಯಲು 28 ರಿಂದ 56 ದಿನಗಳ ಅಂತರವಿದೆ.