ನವದೆಹಲಿ: ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್ ಪ್ಲಾಟ್ ಫಾರಂನ್ನು ಶೀಘ್ರದಲ್ಲಿಯೇ ಎಲ್ಲಾ ರಾಷ್ಟ್ರಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ನಡೆದ ಕೋವಿನ್ ಜಾಗತಿಕ ಸಮಾವೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಅದರ ಪರಿಣಿತಿ ಮತ್ತು ಸಂಪನ್ಮೂಲವನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್ಎಫ್) ಮುಖ್ಯ ಕಾರ್ಯತಂತ್ರದ ಅಧ್ಯಯನಗಳ ಪ್ರಾಧ್ಯಾಪಕ ಹರ್ಷ್ ವಿ ಪಂತ್, “ಕೋವಿನ್ ಪ್ಲಾಟ್‌ಫಾರ್ಮ್‌ನ ಮುಕ್ತ-ಮೂಲ ಆವೃತ್ತಿಯನ್ನು ರಚಿಸುವ ಭಾರತ ಸರ್ಕಾರದ ನಿರ್ಧಾರವು ಭಾರತದ ಸಹಕಾರ ನೀತಿಗಳನ್ನ ಮುಂದುವರೆಸುತ್ತಿದೆ. ಸವಾಲನ್ನು ನಿರ್ವಹಿಸುವಲ್ಲಿ ಮತ್ತು ಇತರ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವಲ್ಲಿ ಜಾಗತಿಕ ಸಹಕಾರದ ಅಗತ್ಯವನ್ನು ಇದು ಒತ್ತಿಹೇಳುತ್ತದೆ" ಎಂದರು.
ಇದನ್ನು ಓದಿ: ಹಿಂದೂ ಕುಟುಂಬದಲ್ಲಿ ಜನಿಸಿದ್ರೂ ಸಿಖ್ ಧರ್ಮದ ಅನುಯಾಯಿ: ಚಿನ್ನದಲ್ಲಿ ಮೂಡಿದ ಶ್ರೀ ಗುರುಗ್ರಂಥ ಸಾಹೀಬ್
"ಇನ್ನು ಕೋವಿನ್ ಪ್ಲಾಟ್‌ಫಾರ್ಮ್‌ನ ಮುಕ್ತತೆಯು ಸಂಬಂಧಿತ ಔಷಧಿಗಳು ಅಥವಾ ಲಸಿಕೆಗಳನ್ನು ಪೂರೈಸುವ ಮೂಲಕ ಮಾತ್ರವಲ್ಲದೆ ಕೊರೊನಾ ಸವಾಲನ್ನು ಎದುರಿಸಲು ಇತರ ರಾಷ್ಟ್ರಗಳಿಗೆ ಸುಲಭವಾಗುವಂತೆ ಮಾಡಲಾಗುತ್ತದೆ. ಇದು ಜವಾಬ್ದಾರಿಯುತ ಜಾಗತಿಕ ಮಧ್ಯಸ್ಥಗಾರನಾಗಿ ಭಾರತ ಮುಂದುವರಿಯಲು ಸಹಕಾರಿ” ಎಂದು ಹೇಳಿದರು.
ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡಾ ಸೇರಿದಂತೆ 50 ದೇಶಗಳು ಕೋವಿನ್ ಪ್ಲಾಟ್‌ಫಾರ್ಮ್ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ.
ಕೋವಿನ್ ಎಂದರೆ, ಕೋವಿಡ್ ಲಸಿಕೆಯ ಇಂಟೆಲಿಜೆನ್ಸ್ ವರ್ಕ್. ಇದನ್ನು ಜನವರಿ 2021ರಲ್ಲಿ ಭಾರತ ಸರ್ಕಾರವು ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದಾಗ ಶುರುಮಾಡಿತು. ಲಸಿಕೆ ಪ್ರಕ್ರಿಯೆಗೆ ಸಂಬಂಧಿಸಿ, ಫಲಾನುಭವಿಗಳಿಗೆ ಮತ್ತು ಅಧಿಕಾರಿಗಳಿಗಾಗಿ ಈ ವೆಬ್‌ಸೈಟ್ ಅನ್ನು ವಿಶೇಷವಾಗಿ ರಚಿಸಲಾಗಿದೆ. ಲಸಿಕೆ ದಾಸ್ತಾನುಗಳ ಜಾಡ ಪರಿಶೀಲಿಸಲು ಮತ್ತು ಅಗತ್ಯಕ್ಕೆ ಅನುಗುಣವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.