ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತವು ಫ್ರಾನ್ಸ್‌ನಿಂದ ಇನ್ನೂ 26 ರಫೇಲ್ ಯುದ್ಧ ವಿಮಾನಗಳು ಮತ್ತು 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಯೋಜಿಸುತ್ತಿದೆ. ಈ ಪ್ರಸ್ತಾವನೆಯನ್ನು ರಕ್ಷಣಾ ಪಡೆಗಳು ರಕ್ಷಣಾ ಸಚಿವಾಲಯದ ಮುಂದೆ ಇಡಲಾಗಿದ್ದು, ಈ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಸಮಯದಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಗೆ ಅಗತ್ಯವಿರುವ 4 ತರಬೇತುದಾರ ವಿಮಾನಗಳ ಜೊತೆಗೆ 22 ಏಕ ಆಸನದ ರಫೇಲ್ ಯುದ್ಧ ವಿಮಾನಗಳನ್ನು ಪಡೆಯುವ ಪ್ರಸ್ತಾವವಿದೆ. ಭದ್ರತಾ ಸವಾಲುಗಳು ಹೆಚ್ಚಾಗುತ್ತಿರುವ ಕಾರಣ ರಫೇಲ್ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ಸ್ಕಾರ್ಪೀನ್ ನೌಕೆಗಳ ತುರ್ತು ಖರೀದಿಗೆ ಬೇಡಿಕೆ ಇಡಲಾಗಿದೆ. ವಿಮಾನವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಸದ್ಯಕ್ಕೆ ಹಳೆಯದಾದ ಮಿಗ್-29 ವಿಮಾನಗಳನ್ನು ಹೊಂದಿವೆ. ಈ ಎರಡೂ ವಾಹಕಗಳ ಕಾರ್ಯಾಚರಣೆಗೆ ಅತ್ಯಾಧುನಿಕ ಮತ್ತು ತೀಕ್ಷ್ಣವಾದ ರಫೇಲ್ ಫೈಟರ್ ಜೆಟ್ಗಳನ್ನು ಹೊಂದುವ ಯೋಜನೆ ಇದೆ.
ಸ್ಕಾರ್ಪೀನ್ ವಿಧದ 3 ಜಲಾಂತರ್ಗಾಮಿ ನೌಕೆಗಳನ್ನು ಪ್ರಾಜೆಕ್ಟ್ 75 ರ ಭಾಗವಾಗಿ ಪುನರಾವರ್ತಿತ ಒಪ್ಪಂದದ ಅಡಿಯಲ್ಲಿ ಖರೀದಿಗೆ ಚಿಂತಿಸಲಾಗಿದೆ. ಅವುಗಳನ್ನು ಮುಂಬೈನ ಮಜಗಾನ್ ಡಾಕ್‌ಯಾರ್ಡ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸುವ ಕುರಿತು ಮಾತುಕತೆ ನಡೆಸಲಾಗುವುದು. ಈ ಒಪ್ಪಂದವು 90,000 ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದರೆ, ಈ ಅಂದಾಜು ಮೊತ್ತವು ಎಲ್ಲ ಮಾತುಕತೆಗಳು ಪೂರ್ಣಗೊಂಡ ನಂತರವೇ ಅಂತಿಮಗೊಳ್ಳಲಿದೆ. ಒಪ್ಪಂದದ ಘೋಷಣೆಯ ಬಳಿಕ ಖರೀದಿ ವೆಚ್ಚ ಗೊತ್ತಾಗಲಿದೆ ಎಂದು ತಿಳಿದುಬಂದಿದೆ.
ಭಾರತವು ಈ ಒಪ್ಪಂದದಲ್ಲಿ ಹೆಚ್ಚಿನ ಬೆಲೆ ರಿಯಾಯಿತಿಯನ್ನು ಪಡೆಯುವ ಸಾಧ್ಯತೆಯಿದೆ. ಸ್ಕಾರ್ಪೀನ್ ನೌಕೆಗಳ ತಯಾರಿ ಯೋಜನೆಯಲ್ಲಿ 'ಮೇಕ್-ಇನ್-ಇಂಡಿಯಾ'ವನ್ನು ಹೊಂದಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಫ್ರಾನ್ಸ್ ಮಧ್ಯೆ ಈ ಹಿಂದೆ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕುರಿತು ಇನ್ನಷ್ಟು ಮಾತುಕತೆ ನಡೆಸಲು ಜಂಟಿ ತಂಡವನ್ನು ರಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಫೇಲ್ ಯುದ್ಧ ವಿಮಾನಗಳ ಖರೀದಿ ಕುರಿತ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯದಲ್ಲಿ ಈಗಾಗಲೇ ಉನ್ನತ ಮಟ್ಟದ ಸಭೆಗಳಲ್ಲಿ ಚರ್ಚಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ರಕ್ಷಣಾ ಮಂಡಳಿಯ ಮುಂದೆ ಇಡುವ ಸಾಧ್ಯತೆಯಿದೆ. ಒಪ್ಪಂದ ಘೋಷಣೆಯ ಮೊದಲು ಯುದ್ಧ ವಿಮಾನ, ನೌಕೆಗಳ ಖರೀದಿಯ ಅಗತ್ಯತೆಯ ಬಗ್ಗೆ ಸರ್ಕಾರದಿಂದ ಬೆಂಬಲ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್ನ ರಫೇಲ್ ಫೈಟರ್ ಜೆಟ್