- " class="align-text-top noRightClick twitterSection" data="">
ನವದೆಹಲಿ: ಸರ್ಚ್ ಎಂಜಿನ್ ಗೂಗಲ್ ತನ್ನದೇ ಆದ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಆಗಾಗ ಜಗತ್ತಿನ ಕೆಲ ಅಪರೂಪದ ಸಂಗತಿಗಳು, ಗಣ್ಯರ ಜನ್ಮದಿನ, ರಾಷ್ಟೀಯ ಹಬ್ಬಗಳನ್ನು ಸರ್ಚ್ ಎಂಜಿನ್ ಮುಖಪುಟದಲ್ಲಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುತ್ತದೆ. ಇಂದೂ ಸಹ ಗೂಗಲ್ ತನ್ನ ಡೂಡಲ್ನಲ್ಲಿ ಎಲ್ಲಾ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸಿದೆ.
ಗುಜರಾತ್ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಹಂಚಿಕೊಂಡಿದೆ. 1950 ಜನವರಿ 26 ರಂದು ಭಾರತವು ಸಂವಿಧಾನದ ಅಂಗೀಕಾರದೊಂದಿಗೆ ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ಶುಭ ದಿನವನ್ನು ಗೂಗಲ್ ಡೂಡಲ್ ಕೂಡ ನೆನಪಿಸಿಕೊಂಡು ದೇಶದ ಜನತೆಗೆ ಶುಭಕೋರಿದೆ.
ಕಲಾಕೃತಿಯಲ್ಲೇನಿದೆ?: ಗೂಗಲ್ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದದಿಂದ ರಚಿಸಲಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕಲ್ ಸವಾರರು ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವು ಅಂಶಗಳನ್ನು ಕಾಣಬಹುದು. ಗಣತಂತ್ರದ ಮಹತ್ವವೇನು ನೋಡೋಣ.
ಗಣರಾಜ್ಯೋತ್ಸವದ ಮಹತ್ವ: ಪ್ರತಿವರ್ಷ ಜನವರಿ 26ರಂದು ನಮ್ಮ ದೇಶದಲ್ಲಿ ಗಣತಂತ್ರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಇದು ಇಡೀ ದೇಶಕ್ಕೆ ಸಂಬಂಧಿಸಿದ ಹಬ್ಬ. ಈ ವರ್ಷ ದೇಶಾದ್ಯಂತ 74ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತವು 1947 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಬಳಿಕ ಶೀಘ್ರದಲ್ಲೇ ಸಂವಿಧಾನ ರಚಿಸಲಾರಂಭಿಸಿತು. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್ 9ರಂದು ನಡೆಯಿತು. ಕೊನೆಯ ಅಧಿವೇಶನ 1949ರ ನವೆಂಬರ್ 26ರಂದು ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಈ ಕೊನೆಯ ಅಧಿವೇಶನವಾಗಿ ಒಂದು ವರ್ಷದ ಬಳಿಕ 1950 ಜನವರಿ 26ರಂದು ಅಂಗೀಕರಿಸಿತು. ಅಂದಿನಿಂದ ಭಾರತವು ಸುದೀರ್ಘವಾದ ಸಂವಿಧಾನವನ್ನು ಹೊಂದಿರುವ ದೇಶವಾಯಿತು. ಜೊತೆಗೆ, ಭಾರತೀಯ ನಾಗರಿಕರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅಧಿಕಾರ ನೀಡಿತು.
ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ‘ನಾರಿ ಶಕ್ತಿ’ ಅನಾವರಣ.....
ಗಣರಾಜ್ಯೋತ್ಸವದ ಸಂಭ್ರಮ: ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ತವ್ಯ ಪಥದಲ್ಲಿ ಆಕರ್ಷಕ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯುತ್ತದೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪ್ರತಿನಿಧಿಸುವ ಟ್ಯಾಬ್ಲೋಗಳ ಮೆರವಣಿಗೆ ನಡೆಯಲಿದೆ.