ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ಆರ್ಭಟ ಕಡಿಮೆ ಮಾಡುತ್ತಿದೆ. ಕಳೆದ 45 ದಿನಗಳಿಂದ ದೈನಂದಿನ ಕೋವಿಡ್ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿದೆ. ನಿನ್ನೆ 57,944 ಮಂದಿ ವೈರಸ್ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದಿದ್ದು, 50,040 ಕೇಸ್ಗಳು ಪತ್ತೆಯಾಗಿವೆ. ಕೋವಿಡ್ ಮರಣ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,258 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲೀಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,02,33,183 ಹಾಗೂ ಮೃತರ ಸಂಖ್ಯೆ 3,95,751ಕ್ಕೆ ಏರಿಕೆಯಾಗಿದೆ. ಆದರೆ ಒಟ್ಟು ಸೋಂಕಿತರ ಪೈಕಿ ಶೇ.96.75 ರಷ್ಟು ಅಂದರೆ 2,92,51,029 ಮಂದಿ ಗುಣಮುಖರಾಗಿದ್ದು, 5,86,403 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Delta Plus ತಂದಿಟ್ಟ ಆತಂಕ: ಆಸ್ಟ್ರೇಲಿಯಾ, ಇಸ್ರೇಲ್ನಲ್ಲಿ ಲಾಕ್ಡೌನ್!
32 ಕೋಟಿ ಡೋಸ್ ವ್ಯಾಕ್ಸಿನೇಷನ್
ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನದಡಿ ದೇಶಾದ್ಯಂತ ಈವರೆಗೆ ಲಸಿಕೆಯ 32 ಕೋಟಿಗೂ ಅಧಿಕ ಡೋಸ್ಗಳನ್ನು ನೀಡಲಾಗಿದೆ. ಈ ಪೈಕಿ 26.48 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್ ಹಾಗೂ 5.62 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್ಗಳನ್ನು ಪಡೆದಿದ್ದಾರೆ.