ನವದೆಹಲಿ : ಬುಧವಾರದಿಂದ ಹೊಸ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,303 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಪಾಸಿಟಿವ್ ದರವು ಶೇ 0.66ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 376ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. ದೇಶದಲ್ಲಿ ಬುಧವಾರ 2,927 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಸದ್ಯದ ಮಟ್ಟಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 16,980 ರಷ್ಟಿವೆ ಎಂದು ತಿಳಿದು ಬಂದಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 2,563 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,28,126ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ. 98.74 ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್ಗಳ ಸಂಖ್ಯೆ 188.40 ಕೋಟಿ ಆಗಿದೆ.
ನಿನ್ನೆ ಒಂದೇ ದಿನಕ್ಕೆ ಸುಮಾರು 39 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 5,23,693ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ಮೂಲಕ ತಿಳಿದುಬಂದಿದೆ.