ನವದೆಹಲಿ: ಆಸ್ಪತ್ರೆಗಳಲ್ಲಿ ಹಾಸಿಗೆ- ಆಮ್ಲಜನಕದ ಕೊರತೆ.. ಸ್ಮಶಾನದಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸಾಲದ ಸ್ಥಳಾವಕಾಶ. ಇಂತಹ ಕಠಿಣ ಪರಿಸ್ಥಿತಿಯನ್ನು ಭಾರತದಲ್ಲಿ ತಂದಿಟ್ಟಿರುವ ಕೊರೊನಾ ಇನ್ನೂ ತನ್ನ ಅಟ್ಟಹಾಸ ನಿಲ್ಲಿಸುತ್ತಿಲ್ಲ. ಸೋಮವಾರ ಒಂದೇ ದಿನ ಅತೀ ಹೆಚ್ಚು ಅಂದರೆ 1,761 ಮಂದಿ ಸೋಂಕಿತರನ್ನು ಬಲಿ ಪಡೆದಿದೆ.
2,59,170 ಹೊಸ ಕೇಸ್ಗಳು ಕೇವಲ 24 ಗಂಟೆಗಳಲ್ಲಿ ಪತ್ತೆಯಾಗಿವೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,53,21,089 ಹಾಗೂ ಮೃತರ ಸಂಖ್ಯೆ 1,80,530ಕ್ಕೆ ಏರಿಕೆಯಾಗಿದೆ. ನಿನ್ನೆ 1,54,761 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,31,08,582 ಮಂದಿ ವೈರಸ್ ಸುಳಿಯಿಂದ ಹೊರಬಂದಿದ್ದಾರೆ.
20 ಲಕ್ಷಕ್ಕೇರಿಕೆಯಾದ ಸಕ್ರಿಯ ಪ್ರಕರಣಗಳು
ಕಳೆದ ತಿಂಗಳಲ್ಲಿ ಒಂದು ಲಕ್ಷದವರೆಗೂ ಇಳಿಕೆ ಕಂಡಿದ್ದ ದೇಶದ ಕೋವಿಡ್ ಸಕ್ರಿಯ ಪ್ರಕರಣಗಳು ಕೊರೊನಾ ಎರಡನೇ ಅಲೆಯ ಉಲ್ಬಣದಿಂದಾಗಿ 20,31,977ಕ್ಕೆ ಹೆಚ್ಚಳವಾಗಿದೆ.
12.71 ಲಕ್ಷ ಮಂದಿಗೆ ಲಸಿಕೆ
ಕೋವಿಡ್ ಲಸಿಕಾಭಿಯಾನದಡಿಯಲ್ಲಿ ಜನವರಿ 16ರಿಂದ ಈವರೆಗೆ ಒಟ್ಟು 12,71,29,113 ಮಂದಿಗೆ ವ್ಯಾಕ್ಸಿನ್ ನೀಡಲಾಗಿತ್ತು. ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗುತ್ತಿದ್ದು, 18 ವರ್ಷ ಮೇಲ್ಪಟ್ಟವರೂ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.