ನವದೆಹಲಿ: ಕೆಲವು ತಿಂಗಳುಗಳ ಹಿಂದೆ ಭಾರತದಲ್ಲಿ ಕೋವಿಡ್ ಆರ್ಭಟ ಹೆಚ್ಚಾಗಿತ್ತು. ಆಗ ಪ್ರತಿನಿತ್ಯ ಲಕ್ಷ ಸನಿಹ ಸೋಂಕಿತರು ಪತ್ತೆಯಾಗುತ್ತಿದ್ದರು. ನಿಧಾನವಾಗಿ ಈ ಸಂಖ್ಯೆ ಅರ್ಧಲಕ್ಷಕ್ಕೆ ತಲುಪಿತ್ತು. ಆದರೆ ಸೋಮವಾರ 20 ಸಾವಿರ ಗಡಿಯಿಂದ ಕೆಳಗಿಳಿದು ಅತಿಕಡಿಮೆ ಪ್ರಕರಣಗಳು ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ 16,432 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 252 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,02,24,303 ಹಾಗೂ ಮೃತರ ಸಂಖ್ಯೆ 1,48,153ಕ್ಕೆ ಏರಿಕೆಯಾಗಿದೆ.
ಓದಿ: ಭಾರತಕ್ಕೂ ಕಾಲಿಟ್ಟ ರೂಪಾಂತರಗೊಂಡ ಕೊರೊನಾ ವೈರಸ್
ಒಟ್ಟು ಸೋಂಕಿತರ ಪೈಕಿ 98 ಲಕ್ಷ (98,07,569) ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದು, 2,68,581 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 28ರ ವರೆಗೆ 16,98,01,74 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,83,695 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಎಚ್ಚರ!
ಇಂಗ್ಲೆಂಡ್ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಬ್ರಿಟನ್ನಿಂದ ಹಿಂದಿರುಗಿದ ಆರು ಮಂದಿಯಲ್ಲಿ ಹೊಸ ತಳಿಯ ವೈರಸ್ ಪತ್ತೆಯಾಗಿದೆ. ಹೀಗಾಗಿ ಜನರು ಇನ್ನಷ್ಟು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ ಹಾಗೂ ಅನಿವಾರ್ಯವಾಗಿದೆ.