ನವದೆಹಲಿ: ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನಕ್ಕೆ ಸಂಕಷ್ಟದಲ್ಲಿ ಸಹಾಯ ಹಸ್ತ ಚಾಚಲು ಅಥವಾ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿಎಸ್ ತಿರುಮೂರ್ತಿ ಪುನರುಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅಪ್ಘಾನಿಸ್ತಾನದ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತಿರುಮೂರ್ತಿ ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ನೀಡುವ ವಿಚಾರದಲ್ಲಿ ನಾವು ದೃಢವಾಗಿರುತ್ತೇವೆ ಎಂದಿದ್ದಾರೆ.
ಅಫ್ಘಾನಿಸ್ತಾನದೊಂದಿಗಿನ ಭಾರತದ ಬಲವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ವಿಶ್ವಸಂಸ್ಥೆಯಲ್ಲಿ ಹೇಳಿದ ತಿರುಮೂರ್ತಿ ಅಫ್ಘಾನಿಸ್ತಾನದ ಇತ್ತೀಚಿನ ಕೆಲವು ಬೆಳವಣಿಗೆಗಳು, ಅದರಲ್ಲೂ ಅಲ್ಲಿನ ಜನರ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೋವಿಡ್ನಿಂದ ವಿಶ್ವದ ಎಲ್ಲ ರಾಷ್ಟ್ರಗಳು ತತ್ತರಿಸಿದ್ದು, ಈ ವೇಳೆ, ಮೂರು ಹಡಗುಗಳಲ್ಲಿ ಔಷಧ ಮತ್ತು ಒಂದು ಮಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಭಾರತ ಅಫ್ಘಾನಿಸ್ತಾನಕ್ಕ ಕಳುಹಿಸಿದೆ. ಇದರ ಜೊತೆಗೆ 50 ಸಾವಿರ ಮೆಟ್ರಿಕ್ ಟನ್ ಗೋಧಿ ರವಾನಿಸಿದೆ ಎಂದು ತಿರುಮೂರ್ತಿ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್ನೂ ಗೋಧಿಯನ್ನು ನೆರವು ನೀಡಲು ಟ್ರಕ್ ಮೂಲಕ ಗೋಧಿ ಸಾಗಿಸಲು ಪಾಕ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆಯಾಗಿದ್ದು, ಮುಂದಿನ ತಿಂಗಳು ಮತ್ತೊಮ್ಮೆ 50 ಮೆಟ್ರಿಕ್ ಟನ್ ಗೋಧಿಯನ್ನು ಭಾರತ, ಅಫ್ಘಾನಿಸ್ತಾನಕ್ಕೆ ಕಳುಹಿಸುವ ನಿರೀಕ್ಷೆಯಿದೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಯ ವಿಚಾರವಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ. ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ನೆರೆಯ ರಾಷ್ಟ್ರಗಳ ಮೇಲೆ ಮಾತ್ರವಲ್ಲದೇ ಒಟ್ಟಾರೆ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿರುಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಕೆಮಿಕಲ್ ಪ್ಲಾಂಟ್ ಸ್ಫೋಟಗೊಂಡು ನಾಲ್ವರಿಗೆ ಗಾಯ: ಬೋಟ್ ದುರಂತ ಪ್ರಕರಣದಲ್ಲಿ ಕಾರ್ಯಾಚರಣೆ ಮುಂದುವರಿಕೆ