ನವದೆಹಲಿ: ಕಳೆದ ವಾರ ರಾಜಸ್ಥಾನದ ಉದಯ್‌ಪುರದಲ್ಲಿ ಸಾವನ್ನಪ್ಪಿದ್ದ 73 ವರ್ಷದ ಸೋಂಕಿತನಿಗೆ ಒಮಿಕ್ರಾನ್ ಇತ್ತು ಎಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದ್ದು, ಒಮಿಕ್ರಾನ್‌ಗೆ ಬಲಿಯಾದ ದೇಶದ ಮೊದಲ ಪ್ರಕರಣ ಎಂದು ಹೇಳಿದೆ.
ಎರಡು ಬಾರಿ ಒಮಿಕ್ರಾನ್ ನೆಗೆಟಿವ್ ಬಂದಿದ್ದ 73 ವರ್ಷದ ವೃದ್ಧನ ಮಾದರಿಗಳನ್ನು ಜಿನೋಮ್ ಸಿಕ್ವೇನ್ಸಿಂಗ್‌ಗಾಗಿ ಕಳುಹಿಸಲಾಗಿತ್ತು. ಡಿ.25 ರಂದು ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ವೃದ್ಧನಿಗೆ ಹೊಸ ರೂಪಾಂತರಿ ದೃಢಪಟ್ಟಿತ್ತು. ಈತ ಡಿ.31 ರಂದು ಉದಯ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಮೃತ ಸೋಂಕಿತನಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಇತ್ತು. ಡಿ.15 ರಂದು ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಜ್ವರ, ಕೆಮ್ಮು ಹಾಗೂ ನೆಗಡಿಯಂತಹ ರೋಗ ಲಕ್ಷಣಗಳನ್ನು ಅವರು ಹೊಂದಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಉದಯಪುರದ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ. ದಿನೇಶ್ ಖರಾಡಿ ಹೇಳಿದ್ದಾರೆ.
ಈ ವ್ಯಕ್ತಿಗೆ ಡಿಸೆಂಬರ್ 21 ಹಾಗೂ 25 ರಂದು ಎರಡು ಬಾರಿ ಪರೀಕ್ಷೆ ಮಾಡಿದಾಗಲೂ ಕೋವಿಡ್ ನೆಗೆಟಿವ್ ಬಂದಿತ್ತು.
ಇದನ್ನೂ ಓದಿ: ಒಮಿಕ್ರಾನ್ ಸೋಂಕಿಗೊಳಗಾಗಿದ್ದ 73 ವರ್ಷದ ವೃದ್ಧ ನಿಧನ