ನವದೆಹಲಿ: ಕೋವಿಡ್ ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವ್ಯಾಕ್ಸಿನ್ ಅಭಿಯಾನ ಹೊಸ ದಾಖಲೆ ಬರೆದಿದೆ. ದೇಶದಲ್ಲಿ ಈವರೆಗೆ 75 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡೋವಿಯಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ಸಬ್ಕಾ ಸಾಥ್, ಸಬ್ಕಾ ಪ್ರಯಾಸ್ (ಎಲ್ಲರ ಬೆಂಬಲದೊಂದಿಗೆ ಎಲ್ಲರ ಅಭಿವೃದ್ಧಿ) ಮಂತ್ರದೊಂದಿಗೆ ಆರಂಭಿಸಿದ್ದ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು 75 ಕೋಟಿ ಲಸಿಕೆಗಳನ್ನು ನೀಡಿದೆ ಎಂದು ಟ್ವೀಟ್ ಮಾಡಿದ್ದು, ಅಭಿನಂದನೆಗಳು ಭಾರತ ಎಂದಿದ್ದಾರೆ.
ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಭಿನಂದನೆ
ಭಾರತ ಲಸಿಕಾ ಅಭಿಯಾನದಲ್ಲಿ 75 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿರುವ ಸಾಧನೆ ಮಾಡಿದೆ. ಕೇವಲ 13 ದಿನಗಳಲ್ಲಿ 65 ರಿಂದ 75 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವುದಕ್ಕೆ ಅಭಿನಂದನೆಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಶಂಸಿಸಿದೆ.
ಇದನ್ನೂ ಓದಿ: ಕೋವಿಡ್ ವಿರುದ್ಧ ಸಮರ: ದೇಶಾದ್ಯಂತ 74 ಕೋಟಿ ಲಸಿಕೆ ಡೋಸ್ ವಿತರಣೆ