ನವದೆಹಲಿ: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಆಕ್ರಮಿತ ಜಮ್ಮು- ಕಾಶ್ಮೀರ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಆರ್ಥಿಕ ಕಾರಿಡಾರ್ ಬಗ್ಗೆ ಚರ್ಚಿಸಿದ್ದನ್ನು ಭಾರತ ತೀವ್ರವಾಗಿ ವಿರೋಧಿಸಿದೆ.
ಈ ಬಗ್ಗೆ ಕಟು ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಇಲಾಖೆ, ಆರ್ಥಿಕ ಕಾರಿಡಾರ್ ಮತ್ತು ಜಮ್ಮು ಕಾಶ್ಮಿರದ ಬಗೆಗಿನ ಚೀನಾ ಮತ್ತು ಪಾಕಿಸ್ತಾನದ ಹೇಳಿಕೆಯನ್ನು ಭಾರತ ತಿರಸ್ಕರಿಸುತ್ತದೆ. ಅಂತಹ ಯಾವುದೇ ಹೇಳಿಕೆಗಳಿಗೆ ಮನ್ನಣೆ ನೀಡಲಾಗದು ಎಂದು ಕಿಡಿಕಾರಿದೆ.
ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಲ್ಲದೇ ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತವೆ. ಚೀನಾ - ಪಾಕಿಸ್ತಾನ ಸಹಭಾಗಿತ್ವದ ಆರ್ಥಿಕ ಕಾರಿಡಾರ್ ಭಾರತದ "ಸಾರ್ವಭೌಮ ಪ್ರದೇಶ"ದಲ್ಲಿ ಹಾದು ಹೋಗುತ್ತಿದ್ದು, ಈ ಯೋಜನೆಗೆ ಭಾರತದ ವಿರೋಧವಿದೆ. ಈ ಬಗ್ಗೆ ಪ್ರತಿಭಟನೆ ಮತ್ತು ಕಳವಳ ಮುಂದುವರಿಯಲಿದೆ ಎಂದು ತಿಳಿಸಿದೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಇಂತಹ ಯೋಜನೆಗಳನ್ನು ರೂಪಿಸುವುದನ್ನು ಭಾರತ ದೃಢವಾಗಿ ಟೀಕಿಸುತ್ತದೆ. ಷರೀಫ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಗೆ ಭಾರತದ ಆಕ್ಷೇಪವಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.
ಯುದ್ಧದ ಮಧ್ಯೆ ಜೈಂಕರ್ ರಷ್ಯಾ ಭೇಟಿ: ಉಕ್ರೇನ್ ಯುದ್ಧ ಮಧ್ಯೆಯೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ನವೆಂಬರ್ 7 ರಿಂದ ಎರಡು ದಿನಗಳ ರಷ್ಯಾ ಭೇಟಿ ಕೈಗೊಳ್ಳಲಿದ್ದಾರೆ. ಈ ವೇಳೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ಭಾರತದ ನಿಲುವು ಸ್ಪಷ್ಟವಾಗಿದೆ. ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಮತ್ತು ಜಾಗತಿಕ ಸಹಕಾರವನ್ನು ದೇಶ ಎಂದಿಗೂ ಬಯಸುತ್ತದೆ. ಈ ಬಗ್ಗೆ ಸಚಿವರು ಚರ್ಚಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಓದಿ: ಕಾನೂನಿನ ಕಣ್ಣಿಗೆ ಮಣ್ಣೆರಚಿದ ಯುವತಿ.. ಸುಳ್ಳು ರೇಪ್ ಕೇಸ್ ಹಾಕಿದ ಮೂವರಿಗೆ ಜೈಲು ಶಿಕ್ಷೆ