ನವದೆಹಲಿ: ಭಾರತ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಭಾರತ ಮತ್ತು ನೇಪಾಳ ನಡುವೆ ದೀರ್ಘಾವಧಿಯ ವಿದ್ಯುತ್ ವ್ಯಾಪಾರ ಒಪ್ಪಂದವನ್ನು ಗುರುವಾರ ಸ್ಥಾಪಿಸಲಾಗಿದೆ. ಈ ವಿದ್ಯುತ್ ವ್ಯಾಪಾರ ಒಪ್ಪಂದವು ಎರಡೂ ದೇಶಗಳ ವಿದ್ಯುತ್ ವಲಯಕ್ಕೆ ಬಲವನ್ನು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ನೇಪಾಳ ನಡುವೆ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭೌತಿಕ ಸಂಪರ್ಕವನ್ನು ಹೆಚ್ಚಿಸಲು ನಾವು ಹೊಸ ರೈಲು ಸಂಪರ್ಕಗಳನ್ನು ಸ್ಥಾಪಿಸಿದ್ದೇವೆ. ಭಾರತ ಮತ್ತು ನೇಪಾಳ ನಡುವೆ ಇಂದು ದೀರ್ಘಾವಧಿಯ ವಿದ್ಯುತ್ ವ್ಯಾಪಾರ ಒಪ್ಪಂದವನ್ನು ಸ್ಥಾಪಿಸಲಾಗಿದೆ ಎಂದರು.
ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟಕ್ಕಾಗಿ ಭಾರತದ ಮಾರ್ಗದ ಮೂಲಕ ನೇಪಾಳದಿಂದ ಸಾಗಣೆ ವಿದ್ಯುತ್ ವ್ಯಾಪಾರದ ವಿಷಯವು ಯಾವಾಗಲೂ ಎರಡು ಕಡೆಯ ನಡುವಿನ ಚರ್ಚೆಯ ಪ್ರಮುಖ ಕಾರ್ಯಸೂಚಿಯಾಗಿ ಉಳಿದಿದೆ. ನೇಪಾಳ ಮತ್ತು ಬಾಂಗ್ಲಾದೇಶಗಳು ವಿದ್ಯುತ್ ಆಮದು ಮತ್ತು ರಫ್ತಿಗೆ ಸಾರಿಗೆ ವಿದ್ಯುತ್ ವ್ಯಾಪಾರವನ್ನು ಅನುಮತಿಸಲು ಭಾರತವನ್ನು ಒತ್ತಾಯಿಸುತ್ತಿವೆ.
ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಬಹಳ ಹಳೆಯ ಮತ್ತು ಬಲವಾದವು. ಇದನ್ನು ಮತ್ತಷ್ಟು ಬಲಪಡಿಸಲು ಇಬ್ಬರೂ ನಾಯಕರು ತಮ್ಮ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ರಾಮಾಯಣ ಸರ್ಕ್ಯೂಟ್‌ಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ನಿರ್ಧರಿಸಿದ್ದಾರೆ.
2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ನೇಪಾಳಕ್ಕೆ ನೀಡಿದ್ದ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ನನಗೆ ನೆನಪಿದೆ, ಒಂಬತ್ತು ವರ್ಷಗಳ ಹಿಂದೆ 2014ರಲ್ಲಿ ನಾನು ನೇಪಾಳಕ್ಕೆ ನನ್ನ ಮೊದಲ ಭೇಟಿ ನೀಡಿದ್ದೆ. ಆ ಸಮಯದಲ್ಲಿ ನಾನು ಭಾರತ - ನೇಪಾಳ ಸಂಬಂಧಗಳಿಗೆ 'ಹಿಟ್ (HIT - H-Highways, I-ways, T-Trans-ways) ಸೂತ್ರವನ್ನು ನೀಡಿದ್ದೆ. ನಮ್ಮ ಗಡಿಗಳು ನಮ್ಮ ನಡುವೆ ಅಡೆತಡೆಯಾಗದಂತೆ ನಾವು ಭಾರತ - ನೇಪಾಳ ನಡುವೆ ಸಂಪರ್ಕಗಳನ್ನು ಸ್ಥಾಪಿಸುತ್ತೇವೆ ಎಂದು ನಾನು ಹೇಳಿದ್ದೆ. ಇಂದು ನೇಪಾಳದ ಪ್ರಧಾನಿ ಮತ್ತು ನಾನು ಭವಿಷ್ಯದಲ್ಲಿ ನಮ್ಮ ಪಾಲುದಾರಿಕೆಯನ್ನು ಸೂಪರ್ ಹಿಟ್ ಮಾಡಲು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ವ್ಯಾಪಾರ, ಜಲವಿದ್ಯುತ್ ಮತ್ತು ಸಂಪರ್ಕ ಕ್ಷೇತ್ರ ಸೇರಿದಂತೆ ಏಳು ಒಪ್ಪಂದಗಳನ್ನು ಎರಡು ರಾಷ್ಟ್ರಗಳು ಮಾಡಿಕೊಂಡಿವೆ. ಭಾರತೀಯ ಅನುದಾನದ ನೆರವಿನಡಿಯಲ್ಲಿ ರುಪೈದಿಹಾ (ಭಾರತ) ಮತ್ತು ನೇಪಾಲ್‌ಗುಂಜ್ (ನೇಪಾಳ) ದಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನ ಉದ್ಘಾಟಿಸಲಾಯಿತು. ಉಭಯ ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಸಂಪರ್ಕದ ಉತ್ತೇಜನಕ್ಕಾಗಿ ರೈಲ್ವೆಯ ಕುರ್ತಾ-ಬಿಜಾಲ್ಪುರ ವಿಭಾಗದ ಇ-ಯೋಜನೆಯನ್ನು ಅನಾವರಣಗೊಳಿಸಲಾಯಿತು. ಜೊತೆಗೆ ಬತ್ನಾಹಾದಿಂದ ನೇಪಾಳ ಕಸ್ಟಮ್ ಯಾರ್ಡ್‌ಗೆ ಭಾರತೀಯ ರೈಲ್ವೆ ಕಾರ್ಗೋ ರೈಲಿಗೆ ಹಸಿರು ನಿಶಾನೆ ತೋರಲಾಯಿತು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ದಹಾಲ್ ಅವರೊಂದಿಗೆ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ನಡೆಸಿದರು. ಆರ್ಥಿಕತೆ, ಇಂಧನ, ಮೂಲಸೌಕರ್ಯ, ಶಿಕ್ಷಣ ಮತ್ತು ಜನರ ಸಂಪರ್ಕಗಳ ಕ್ಷೇತ್ರಗಳಲ್ಲಿ ಹಳೆಯ ಸಂಬಂಧಗಳನ್ನು ಬಲಪಡಿಸುವುದ ಕುರಿತು ಚರ್ಚಿಸಿದರು.
ಇದನ್ನೂ ಓದಿ: ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತೆ ಒತ್ತಡ ವಿಚಾರ: ತನಿಖೆಗೆ ಸಿಎಂ ಆದೇಶ