ನವದೆಹಲಿ: ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ ದೇಶದ ಜನರು ಅತೀ ಹೆಚ್ಚು, ಚಲನಚಿತ್ರಗಳು ಹಾಗೂ ಕೊರಿಯನ್ ಸರಣಿಗಳನ್ನು ವೀಕ್ಷಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನಗೆ ಅತೀ ಹೆಚ್ಚು ವೀಕ್ಷಕರಿದ್ದಾರೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ.
ಕಡಿಮೆ ದರದ ಡೇಟಾ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿಂದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಂತಹ ಒಟಿಟಿ ಮೂಲಕ ಜನರು ಸಿನಿಮಾ, ಸರಣಿಗಳನ್ನು ವೀಕ್ಷಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಇದರ ಬೆಳವಣಿಗೆ ಏರುಗತಿಯಲ್ಲಿ ಸಾಗಿದೆ. ಇನ್ನು ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ವಿಡಿಯೋ ಮತ್ತು ಮ್ಯೂಸಿಕ್ ಸ್ಟ್ರೀಮಿಂಗ್‌ನಂತಹ ಸೇವೆಗಳ ಬಳಕೆ ಇನ್ನಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ.
"ಜಾಗತಿಕವಾಗಿ ನೋಡುವುದಾದರೆ ಭಾರತದ ಜನತೆ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ವೀಕ್ಷಿಸಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಶೇ.80ರಷ್ಟು ಸದಸ್ಯರು ಪ್ರತಿವಾರ ಚಲನಚಿತ್ರವನ್ನು ವೀಕ್ಷಿಸಿದ್ದಾರೆ" ಎಂದು ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಉಪಾಧ್ಯಕ್ಷೆ ಮೋನಿಕಾ ಶೆರ್ಗಿಲ್ ತಿಳಿಸಿದ್ದಾರೆ.