ನವದೆಹಲಿ: ಪ್ಯಾಂಗಾಂಗ್ ಸರೋವರ ತೀರಗಳ ಬಳಿಕ ಭಾರತ ಮತ್ತು ಚೀನಾ ದೇಶಗಳು ಪೂರ್ವ ಲಡಾಖ್‌ನ ಗೋಗ್ರಾ ಪ್ರದೇಶದಿಂದ ತಮ್ಮ ಸೇನೆಗಳನ್ನು ಹಿಂಪಡೆಯಲು ಒಪ್ಪಿಕೊಂಡಿವೆ. ಈ ಮೂಲಕ ಗೋಗ್ರಾ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಮರುಸ್ಥಾಪಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಇತ್ತೀಚೆಗೆ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ 11ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬಳಿಕ ಈ ನಿರ್ಧಾರವನ್ನು ಭಾರತ - ಚೀನಾ ತೆಗೆದುಕೊಂಡಿವೆ. ಈಗಾಗಲೇ ಗೋಗ್ರಾ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಎಲ್ಲ ತಾತ್ಕಾಲಿಕ ಶಿಬಿರಗಳನ್ನು ತೆರವುಗೊಳಿಸಲಾಗಿದ್ದು, ಸಂಬಂಧಿತ ಮೂಲ ಸೌಕರ್ಯಗಳನ್ನು ಎರಡೂ ಕಡೆಯಿಂದ ಕೆಡವಲಾಗಿದೆ. ಹಂತ ಹಂತವಾಗಿ ಸಮನ್ವಯದಿಂದ ಮತ್ತು ಪರಿಶೀಲನೆ ನಡೆಸಿ ಗೋಗ್ರಾದಲ್ಲಿ ಸೇನೆ ನಿಯೋಜಿಸುವುದನ್ನು ನಿಲ್ಲಿಸುತ್ತೇವೆ ಎಂದು ಸೇನೆ ತಿಳಿಸಿದೆ.
ಇನ್ನೆರಡು ಸಂಘರ್ಷದ ಪ್ರದೇಶಗಳು ಬಾಕಿ
2020ರ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಎರಡು ದೇಶಗಳ ಯೋಧರ ನಡುವೆ ಸಂಘರ್ಷ ನಡೆದ ಬಳಿಕ ಇಲ್ಲಿಯವರೆಗೆ 11ನೇ ಬಾರಿ ಸಭೆ ನಡೆಸಲಾಗಿದೆ. ಮಾತುಕತೆಯ ಫಲವಾಗಿ ಈ ಮೊದಲು ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಉಭಯ ರಾಷ್ಟ್ರಗಳು ತಮ್ಮ ಸೇನೆ ಹಿಂದಕ್ಕೆ ಕರೆಯಿಸಿಕೊಂಡಿದ್ದವು.
11ನೇ ಸುತ್ತಿನ ಸಭೆಯಲ್ಲಿ ಪೂರ್ವ ಲಡಾಖ್‌ನ ಗೋಗ್ರಾ, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ - ಈ ಮೂರು ಪ್ರದೇಶಗಳಿಂದ ಭಾರತ ಮತ್ತು ಚೀನಾ ಸೇನೆಗಳು ಶೀಘ್ರವಾಗಿ ತಮ್ಮ ಪ್ರಕ್ರಿಯೆ ನಿಷ್ಕ್ರಿಯಗೊಳಿಸಿ, ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳುವ ಕುರಿತು ಚರ್ಚಿಸಲಾಗಿತ್ತು. ಇದೀಗ ಗೋಗ್ರಾ ಕುರಿತು ಸ್ಪಷ್ಟನೆ ಸಿಕ್ಕಿದ್ದು, ಇನ್ನೆರಡು ಸಂಘರ್ಷದ ಪ್ರದೇಶಗಳಿಂದ ಎರಡೂ ಸೇನಗಳು ಹಿಂದೆ ಸರಿಯಬೇಕಿದೆ.