ಬುಡಾನ್ (ಉತ್ತರ ಪ್ರದೇಶ): ಇಲ್ಲಿನ ಬುಡಾನ್ ಜಿಲ್ಲೆಯಲ್ಲಿ ನಡೆಸಿದ್ದ 50 ವರ್ಷದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನೀಡಿರುವ ಹೇಳಿಕೆಗೆ ಇದೀಗ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.
ಆ ಮಹಿಳೆ ಸಂಜೆಯ ವೇಳೆ ಹೊರ ಹೋಗದಿದ್ದರೆ ಈ ಅತ್ಯಾಚಾರ ತಡೆಯಬಹುದಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆ ಕುಟುಂಬಸ್ಥರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಮತ್ತೆ ಮತ್ತೆ ಮಹಿಳೆಯರಿಗೆ ಹೇಳುತ್ತೇನೆ, ಮಹಿಳೆಯರು ಸಂಜೆಯಾದ ಮೇಲೆ ಯಾವುದೇ ಕಾರಣಕ್ಕೂ ಹೊರ ಹೋಗಬೇಡಿ ಎಂದಿದ್ದಾರೆ.
ಆಕೆ ಸಂಜೆ ಮನೆಯಿಂದ ಹೊರ ಹೋಗದಿದ್ದರೆ ಅಥವಾ ಕುಟುಂಬದ ಒಬ್ಬರ ಜೊತೆ ಹೊರ ಹೋಗಿದ್ದರೆ ಬಹುಶಃ ಘಟನೆ ತಡೆಯಬಹುದಿತ್ತು. ಆದರೆ, ಈ ಕೃತ್ಯ ಪೂರ್ವ ಯೋಜಿತ. ಆಕೆಗೆ ಫೋನ್ ಕರೆ ಬಂದ ತಕ್ಷಣ ಆಕೆ ಹೊರ ಹೋಗಿದ್ದಾಳೆ, ಇದರಿಂದ ಈ ಘಟನೆ ನಡೆದಿದೆ ಎಂದಿದ್ದಾರೆ.
ಭಾನುವಾರ ದೇವಾಲಯಕ್ಕೆ ತೆರಳಿದ್ದ 50 ವರ್ಷದ ಅಂಗನವಾಡಿ ಕಾರ್ಯಕರ್ತೆಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಕುಟುಂಬಸ್ಥರು ದೇವಾಲಯದ ಅರ್ಚಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು.
ಈ ಸಂಬಂಧ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅರ್ಚಕ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿನಿ ಅಪಹರಿಸಿ ಸಾಮೂಹಿಕ ಅತ್ಯಾಚಾರ, ಕೊಲೆಗೆ ಯತ್ನ