ಚೆನ್ನೈ (ತಮಿಳುನಾಡು): ಮುಂದಿನ ದಿನಗಳಲ್ಲಿ ತಮಿಳರೊಬ್ಬರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಸಂಕಲ್ಪ ತೊಡಬೇಕೆಂದು ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಕರೆ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ತಮಿಳುನಾಡಿಗೆ ಅಮಿತ್ ಶಾ ಭೇಟಿ ನೀಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೆ. ಕಾಮರಾಜ್ ಮತ್ತು ಜಿ. ಕೆ. ಮೂಪನಾರ್ ಅವರು ಪ್ರಧಾನಿಯಾಗುವ ಅವಕಾಶವನ್ನು ನಾವು ತಪ್ಪಿಸಿಕೊಂಡಿದ್ದೇವೆ. ಈ ಮೂಲಕ ಎರಡು ಬಾರಿ ತಮಿಳರು ಪ್ರಧಾನಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಡಿಎಂಕೆಯೇ ಪ್ರಮುಖ ಕಾರಣ. ಹಾಗಾಗಿ ನಾವು ಇಂದು ತಮಿಳರನ್ನು ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕಾಗಿದೆ. ಪ್ರಧಾನಿಯಾಗುವವರು ಹಾಗೂ ಮುಖ್ಯಮಂತ್ರಿಯಾಗುವವರು ಬಡ ಕುಟುಂಬದ ಹಿನ್ನೆಲೆಯಿಂದ ಬರಬೇಕು ಎಂದು ಶಾ ಸಭೆಯಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 25 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಪದಾಧಿಕಾರಿಗಳು ಶ್ರಮಿಸಬೇಕು. ಈ ಸಂಬಂಧ ಬೂತ್ ಸಮಿತಿಗಳನ್ನು ಬಲಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನಿಂದ ಒಟ್ಟು 25 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದಲ್ಲಿ ಶೇ.60ರಷ್ಟು ಬೂತ್ ಮಟ್ಟದ ಕೆಲಸಗಳು ಪೂರ್ಣಗೊಂಡಿದ್ದು, ಉಳಿದ ಶೇ.40 ರಷ್ಟು ಕೆಲಸಗಳನ್ನು ಸೆಪ್ಟಂಬರ್ ವೇಳೆಗೆ ಪೂರ್ಣಗೊಳಿಸಬೇಕು. ದಕ್ಷಿಣ ಚೆನ್ನೈ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಮಟ್ಟದಲ್ಲಿ ಶ್ರಮಿಸಬೇಕು. ಬಿಜೆಪಿ ಸರ್ಕಾರದ 9 ವರ್ಷಗಳ ಸಾಧನೆಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಕೇಂದ್ರ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಿದಾಗ ವಿಮಾನ ನಿಲ್ದಾಣದ ಹೊರಗಿದ್ದ ರಸ್ತೆಯ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಈ ಬಗ್ಗೆ ವಿದ್ಯುತ್ ವ್ಯತ್ಯಯ ಆಗುತ್ತಿರುವುದು ನನಗೆ ಹೊಸದೇನಲ್ಲ. ಇದು ತಮಿಳುನಾಡು ಅಂಧಕಾರದಲ್ಲಿದೆ ಎಂಬುದನ್ನು ತೋರಿಸುತ್ತದೆ. ನಾವು ಕತ್ತಲೆಯಲ್ಲಿರುವ ತಮಿಳುನಾಡಿಗೆ ಬೆಳಕನ್ನು ತರುತ್ತೇವೆ ಎಂದು ಹೇಳಿದರು. ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಬೀದಿ ದೀಪಗಳು ಆಫ್ ಆಗಿದ್ದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದೊಂದು ಭದ್ರತಾ ಲೋಪ ಎಂದು ಆರೋಪಿಸಿದ್ದಾರೆ. ಚೆನ್ನೈನಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯ ನಂತರ ಅಮಿತ್ ಶಾ ಅವರು ವೆಲ್ಲೂರಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.
ಅಮಿತ್ ಶಾ ತಮಿಳುನಾಡಿಗೆ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ''ಕೇಂದ್ರ ಸಚಿವ ಅಮಿತ್ ಶಾ ಅವರು ವೆಲ್ಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲು ಚೆನ್ನೈಗೆ ಬರುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಿದ್ದರು.
ಇದನ್ನು ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ '' ಲೋಕಸಭೆ ಚುನಾವಣೆ ಹಿನ್ನೆಲೆ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಿಲ್ಲ. ಇದೊಂದು ಸಾಮಾನ್ಯ ಭೇಟಿ ಎಂದು ಹೇಳಿದ್ದಾರೆ. ಅಮಿತ್ ಶಾ ಅವರು ವೆಲ್ಲೂರಿಗೆ ಭೇಟಿ ನೀಡಬೇಕೆಂದು ಬಯಸಿದ್ದರು. ಆರು ತಿಂಗಳ ಹಿಂದೆ ಜೆಪಿ ನಡ್ಡಾ ಅವರು ಶಿವಗಂಗೆಗೆ ಭೇಟಿ ನೀಡಿದ್ದರು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ತಮಿಳುನಾಡಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ 2019ರಲ್ಲಿ ವೆಲ್ಲೂರಿನಿಂದ ಸ್ಪರ್ಧಿಸಿದ್ದ ಎಸಿ ಷಣ್ಮುಗಂ ಅವರನ್ನು ಶಾ ಭೇಟಿ ಮಾಡಿದರು. ಷಣ್ಮುಗಂ ಅವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಪಕ್ಷದ ಅಭ್ಯರ್ಥಿ ಕತಿ ಆನಂದ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ 8,141 ಮತಗಳ ಅಂತರದಿಂದ ಷಣ್ಮುಗಂ ಸೋಲನ್ನು ಅನುಭವಿಸಿದ್ದರು.
ಇದನ್ನೂ ಓದಿ : ಲಾಲು ಪ್ರಸಾದ್ ಯಾದವ್ 'ಸಾಮಾಜಿಕ ನ್ಯಾಯದ ಅಚಲ ಯೋಧ': ಸಿಎಂ ಸ್ಟಾಲಿನ್ ಶ್ಲಾಘನೆ