ಥಾಣೆ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕಳೆದ ಏಳೂವರೆ ವರ್ಷಗಳಿಂದ ಥಾಣೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಾಗೂ ಒಂದು ವರ್ಷದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲಿನ ಲೋಖಂಡೇವಾಡಿಯ ವಿದ್ಯಾರ್ಥಿಗಳು, ರೋಗಿಗಳು ಸೇರಿ ಇಡೀ ಗ್ರಾಮಸ್ಥರು ಮಳೆಗಾಲದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸಂಚರಿಸುತ್ತಿರುವ ಪರಿಸ್ಥಿತಿ ಇದೆ.
![ಮಹಾ ಸಿಎಂ ಶಿಂಧೆ ಉಸ್ತುವಾರಿ ಜಿಲ್ಲೆಯಲ್ಲಿ ಹಳ್ಳಿಗರ ಬದುಕು ದುಸ್ತರ: ಪ್ರಾಣವನ್ನೇ ಪಣಕ್ಕಿಡುವ ಪರಿಸ್ಥಿತಿ](https://etvbharatimages.akamaized.net/etvbharat/prod-images/27-07-2023/19112382_thum111.jpg)
ಮೂರು ವರ್ಷಗಳ ಹಿಂದೆ ಏಕನಾಥ್ ಶಿಂಧೆ ಅವರ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮುರಬಾದ್ ತಾಲೂಕಿನ ಲೋಖಂಡೇವಾಡಿಯಿಂದ ಢಸಾಯಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹೊಳೆಗೆ ಸೇತುವೆ ಮಂಜೂರಾಗಿತ್ತು. ಈ ಸೇತುವೆ ಇನ್ನೂ ಕಾಗದದಲ್ಲಿಯೇ ಉಳಿದಿದೆ. ಇದರಿಂದಾಗಿ ದೂರದ ಪ್ರದೇಶಗಳಲ್ಲಿ ತೆರಳಲು ರಸ್ತೆ, ಸೇತುವೆ ಇಲ್ಲದೆ ಬುಡಕಟ್ಟು ಸಮುದಾಯಗಳ ಬದುಕು ದುಸ್ತರವಾಗಿದೆ.
ಮಹಾವಿಕಾಸ್ ಆಘಾಡಿ ಸರ್ಕಾರ ಪತನದ ನಂತರ ಅಧಿಕಾರಕ್ಕೆ ಬಂದ ನಂತರ ಶಿಂಧೆ-ಫಡ್ನವೀಸ್ ಸರ್ಕಾರ 'ನಿರ್ಣಯ ವೇಗ, ಮಹಾರಾಷ್ಟ್ರ ವೇಗ’ ಎಂದು ಪ್ರಚಾರ ಮಾಡಿದೆ. ಖುದ್ದು ಶಿಂಧೆ ಅವರೇ ಸರ್ಕಾರವನ್ನು ನಡೆಸುತ್ತಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆಯು ಗಿರಿಜನರ ಅಭಿವೃದ್ಧಿ ಹೆಸರಿನಲ್ಲಿ ಕೈಗೆತ್ತಿಕೊಂಡಿರುವ ಹಲವು ಕಾಮಗಾರಿಗಳು ಕಾಗದದಲ್ಲಿವೆ. ಇಂದಿಗೂ ಮೂಲ ಸೌಕರ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ.
ಲೋಖಂಡೇವಾಡಿ ಗ್ರಾಮದಲ್ಲಿ ಬುಡಕಟ್ಟು ಜನಸಂಖ್ಯೆಯು ಸುಮಾರು 150ರಷ್ಟಿದೆ. ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಇಲ್ಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ರೋಗಿಗಳು ನಾಲ್ಕು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕಾಗಿದೆ. ಅದರಲ್ಲೂ, ಕಳೆದ ಐದು ದಿನಗಳಿಂದ ಮುರಬಾದ್ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಗರ್ಭಿಣಿಯರು ಹಾಗೂ ಬಾಣಂತಿಯರನ್ನು 4 ಕಿ.ಮೀ ದೂರದ ಆರೋಗ್ಯ ಕೇಂದ್ರಕ್ಕೆ ಹಾಸಿಗೆಯಲ್ಲಿ ಎತ್ತಿಕೊಂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮುಂಬೈನ ತಗ್ಗು ಪ್ರದೇಶಗಳು ಜಲಾವೃತ: ಮತ್ತೊಂದೆಡೆ, ರಾಜ್ಯ ರಾಜಧಾನಿ ಮುಂಬೈನಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಮುಂಬೈನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆ ಸಂಚಾರದ ಜೊತೆಗೆ ಮುಂಬೈನ ಜೀವನಾಡಿ ಎಂದು ಕರೆಯಲ್ಪಡುವ ರೈಲ್ವೆಯ ಸ್ಥಳೀಯ ಸೇವೆಯ ಮೇಲೂ ಪರಿಣಾಮ ಬೀರಿದೆ. ಬಂದರು ಮಾರ್ಗದ ರೈಲುಗಳ ಸಂಚಾರದಲ್ಲೂ ಅಡೆತಡೆ ಉಂಟಾಗಿದೆ. ಆದಾಗ್ಯೂ, ಪಶ್ಚಿಮ ರೈಲ್ವೆ ಮತ್ತು ಮಧ್ಯ ರೈಲ್ವೆಯ ಸೇವೆಗಳು ಸುಗಮವಾಗಿವೆ.
ಜೂನ್ 25ರಿಂದ ಮುಂಬೈನಲ್ಲಿ ಮಳೆ ಪ್ರಾರಂಭವಾಗಿದೆ. ಇದುವರೆಗೆ ಮುಂಬೈ ಒಂದು ತಿಂಗಳಲ್ಲಿ 2000 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳಲ್ಲಿ ಒಟ್ಟು 1,512.7 ಮಿ.ಮೀ ಮಳೆಯಾಗಿದ್ದು, ಜುಲೈ ತಿಂಗಳಲ್ಲೇ ಹೊಸ ದಾಖಲೆಯ ಮಳೆಯಾಗಿದೆ. ಮುಂಬೈನಲ್ಲಿ ಒಂದೇ ದಿನದಲ್ಲಿ 944 ಮಿ.ಮೀ ಮಳೆ ಸುರಿದಿದೆ.
ಇದನ್ನೂ ಓದಿ: Heavy flood: ಭಾರಿ ಮಳೆ ಹಿನ್ನೆಲೆ ಕಾಜಿಪೇಟೆ ರೈಲು ನಿಲ್ದಾಣ ಜಲಾವೃತ..