ಶ್ರೀನಗರ, ಜಮ್ಮು ಕಾಶ್ಮೀರ: ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಮತ್ತು ಮಿಲಿಟರಿ ಬೆಳವಣಿಗೆಗಳು ಭಾರತದ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ನ ಗೀತಂ ವಿಶ್ವವಿದ್ಯಾಲಯದ ಕೌಟಿಲ್ಯ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ದೇಶದ ಗಡಿಗಳ ಭದ್ರತೆ ಬಲಿಷ್ಟವಾಗಿದ್ದು, ಒಳನುಸುಳುವಿಕೆ ನಿಯಂತ್ರಣದಲ್ಲಿದೆ. ಇದರಿಂದಾಗಿ ಭಾರತ ಮೇಲೆ ಆಫ್ಘನ್ ಬೆಳವಣಿಗೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಯುವಕರು ರಾಜಕೀಯಕ್ಕೆ ಬರಬೇಕು ಮತ್ತು ಕುಟುಂಬ ರಾಜಕಾರಣವನ್ನು ತೊಲಗಿಸಬೇಕು ಎಂದು ಒಮರ್ ಅಬ್ದುಲ್ಲಾ ಕರೆ ನೀಡಿದ್ದು, ಕೌಟಿಲ್ಯ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ.
ನೀವು ಪ್ರಸ್ತುತ ದೇಶದ ಪ್ರಧಾನಿಯಾಗಿದ್ದರೆ ಆಫ್ಘಾನಿಸ್ತಾನದ ಸಮಸ್ಯೆಗೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಒಮರ್ ಅಬ್ದುಲ್ಲಾ, ಈ ವೇಳೆ ಮಾನವೀಯ ದೃಷ್ಟಿಕೋನದಿಂದ ವರ್ತಿಸುತ್ತಿದ್ದೆನು. ಸಾಧ್ಯವಾದಷ್ಟು ನಿರಾಶ್ರಿತರಿಗೆ ಆಶ್ರಯ ಕಲ್ಪಿಸುತ್ತಿದ್ದೆ ಎಂದು ಉತ್ತರಿಸಿದ್ದಾರೆ.
ಜಮ್ಮು ಕಾಶ್ಮೀರದ ವಿಚಾರವಾಗಿಯೂ ಮಾತನಾಡಿದ ಒಮರ್ ಅಬ್ದುಲ್ಲಾ ಯಾವುದಾದರೂ ಪವಾಡ ಸಂಭವಿಸದ ಹೊರತು ಭಾರತ ಮತ್ತು ಪಾಕ್ ಸಂಬಂಧ ಇತ್ಯರ್ಥವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಟಿಕಲ್ 370 ವಿಚಾರವನ್ನು ಉಲ್ಲೇಖಿಸಿದ ಅವರು ಈ ಸಂವಿಧಾನದ ವಿಧಿ ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವಿನ ಸಾಂವಿಧಾನಿಕ ಸೇತುವೆಯಾಗಿತ್ತು. ಈ ವಿಚಾರವಾಗಿ ಜಮ್ಮು ಕಾಶ್ಮೀರದ ಜನರು ಹತಾಶರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ