ಲೂಧಿಯಾನ(ಪಂಜಾಬ್): ವಿಧಾನಸಭಾ ಚುನಾವಣೆ ಕಣ ಪಂಜಾಬ್ನಲ್ಲಿ ರಂಗೇರುತ್ತಿದೆ. ಮತ್ತೊಂದೆಡೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ ಕೋಟ್ಯಂತರ ರೂಪಾಯಿ ನಗದು ವಶಕ್ಕೆ ಪಡೆದಿದೆ.
ಮೂಲಗಳ ಪ್ರಕಾರ ಲೂದಿಯಾನದಲ್ಲಿರುವ ಚನ್ನಿ ಸಂಬಂಧಿಕರಾದ ಭೂಪಿಂದರ್ ಸಿಂಗ್ ಹನಿ ಮನೆಯ ಮೇಲೆ ದಾಳಿ ನಡೆಸಲಾಗಿದ್ದು, 3.9 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧೆಡೆ ನಡೆದ ದಾಳಿಗಳಲ್ಲಿ ಈವರೆಗೆ 10.7 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2018ರಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು. ಈಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಗುರಿಯಾಗಿಸಿಕೊಂಡು ಈ ರೀತಿಯಾಗಿ ಒತ್ತಡ ಹೇರಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೇಳೆಯೂ ಟಿಎಂಸಿ ಅಭ್ಯರ್ಥಿಗಳ ಮನೆ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು.
ಇದನ್ನೂ ಓದಿ: ಯುಪಿ ವಿಧಾನಸಭಾ ಚುನಾವಣೆಯಲ್ಲಿ ಭೀಮ್ ಆರ್ಮಿ ಸ್ವತಂತ್ರವಾಗಿ ಸ್ಪರ್ಧೆ